More

    ಸಣ್ಣ ಕೆರೆಗಳು ಗ್ರಾಪಂ ವ್ಯಾಪ್ತಿಗೆ: ಒತ್ತುವರಿ ತೆರವಿಗೆ ಕ್ರಮ, ಸಮಗ್ರ ಅಭಿವೃದ್ಧಿಗೆ ಯೋಜನೆ..

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕೆರೆಗಳ ಒತ್ತುವರಿ ತಡೆ, ಸಂರಕ್ಷಣೆ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಸಣ್ಣ ಕೆರೆಗಳನ್ನು ನೀರಾವರಿ ಇಲಾಖೆ ವ್ಯಾಪ್ತಿಯಿಂದ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ.

    ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ 12 ಸಾವಿರಕ್ಕೂ ಅಧಿಕ ಕೆರೆಗಳಿವೆ. ಆದರೆ, ಹೂಳೆತ್ತದಿರುವುದು, ನಿರ್ವಹಣೆ ಕೊರತೆಯಿಂದಾಗಿ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಗಿಡಗಂಟಿ ಬೆಳೆದು ನೀರು ಸಂಗ್ರಹ ಸಾಮರ್ಥ್ಯವೂ ಕುಸಿಯುತ್ತಿದೆ. ಇಂತಹ ಕೆರೆಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಪಂಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯಿತಿಗಳು ಆರಂಭಿಸಿವೆ.

    ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಂತರ್ಜಲ ಮಟ್ಟ ವೃದ್ಧಿಸಲು, ಕೆರೆಗಳ ಸಂರಕ್ಷಣೆ ಮಾಡಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಲವೆಡೆ 5ರಿಂದ 10 ಎಕರೆ ಪ್ರದೇಶದಲ್ಲಿ ಹೊಸ ಕೆರೆಗಳನ್ನು ಇಲಾಖೆ ನಿರ್ವಿುಸುತ್ತಿದೆ. ಈ ಹಿನ್ನೆಲೆಯಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣದ ಕೆರೆಗಳನ್ನು ಅಭಿವೃದ್ಧಿಪಡಿಸಲು ಗ್ರಾಪಂಗಳಿಗೆ ಹಸ್ತಾಂತರಿಸಲು ಸರ್ಕಾರ ಕ್ರಮ ವಹಿಸಿದೆ.

    ರಾಜ್ಯ ಸರ್ಕಾರವು 2018-19ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳ ಹೂಳೆತ್ತಲು ‘ಕೆರೆ ಸಂಜೀವಿನಿ’ ಯೋಜನೆ ಘೊಷಣೆ ಮಾಡಿ 100 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಅತಿವೃಷ್ಟಿ, ಕರೊನಾ ಕಾರಣಗಳಿಂದ ಇದು ಅರ್ಧಕ್ಕೆ ನಿಂತಿತ್ತು. ಇದರಿಂದಾಗಿ ಕೆರೆಗಳಲ್ಲಿ ಹೂಳೆತ್ತುವ ಕೆಲಸ ಆರಂಭಗೊಂಡಿಲ್ಲ. ಹೀಗಾಗಿ ಗ್ರಾಪಂಗಳ ವ್ಯಾಪ್ತಿಗೆ ಮರಳಿ ತಂದು ನರೇಗಾದಡಿ ಅಭಿವೃದ್ಧಿ ಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ತಾಂತ್ರಿಕ ಸಮಸ್ಯೆ ಇತರ ಕಾರಣಗಳಿಂದಾಗಿ ಕೆರೆಗಳ ಹಸ್ತಾಂತರಿಸುವ ಕೆಲಸ ವೇಗ ಪಡೆದುಕೊಂಡಿಲ್ಲ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಕೆರೆಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲೆಲ್ಲಿ ಕೆರೆಗಳ ಒತ್ತುವರಿಯಾಗಿದೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲಿ ಎಲ್ಲ ಕೆರೆಗಳನ್ನು ಗ್ರಾಪಂ ವ್ಯಾಪ್ತಿಗೆ ಪಡೆದು ಅಭಿವೃದ್ಧಿ ಪಡಿಸಲಾಗುವುದು.

    | ದರ್ಶನ್ ಎಚ್.ವಿ. ಜಿಪಂ ಸಿಇಒ, ಬೆಳಗಾವಿ

    ನಮ್ಮ ಇಲಾಖೆ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಕೆರೆಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಗ್ರಾಪಂಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಗ್ರಾಪಂಗಳಿಗೆ ಕೆರೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭಗೊಂಡಿಲ್ಲ.

    | ಕೆ.ಸಿ. ಸತೀಶ ಮುಖ್ಯ ಅಭಿಯಂತರ, ಸಣ್ಣ ನೀರಾವರಿ ಇಲಾಖೆ, ಬೆಳಗಾವಿ

    ಒತ್ತುವರಿ ತೆರವು ಸಮಸ್ಯೆ: ರಾಜ್ಯದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಸುಮಾರು 28 ಸಾವಿರ ಕೆರೆಗಳಿವೆ. ಇವುಗಳಲ್ಲಿ ಬಹುತೇಕ ಕೆರೆಗಳು ಒತ್ತುವರಿಯಿಂದ ವಿಸ್ತೀರ್ಣ ತಗ್ಗುತ್ತಿವೆ. ಇದೀಗ ಒತ್ತುವರಿಯಾದ ಕೆರೆಗಳನ್ನು ತೆರವುಗೊಳಿಸಲು ಸರ್ಕಾರವು ಸಮೀಕ್ಷೆ ಕಾರ್ಯ ಆರಂಭಿಸಿದೆ. ಯಾವ ಕರೆ ಎಷ್ಟು ವಿಸ್ತೀರ್ಣವಿದೆ ಎಂಬುದು ಅಧಿಕೃತವಾಗಿ ಗೊತ್ತಾಗುತ್ತಿಲ್ಲ. ದಾಖಲೆಗಳಲ್ಲಿರುವಷ್ಟು ವಿಸ್ತೀರ್ಣ ವಾಸ್ತವದಲ್ಲಿಲ್ಲ. ಕೆರೆಗಳ ಒತ್ತುವರಿ ತೆರವುಗೊಳಿಸುವುದು ಇಲಾಖೆಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts