More

    ಕೆಸರು ಗದ್ದೆಯಾದ ರಸ್ತೆಗಳು!

    ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿಯಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಕಾಮಗಾರಿಗಳು ಕರೊನಾತಂಕದ ಮಧ್ಯೆಯೂ ಭರದಿಂದ ಸಾಗಿವೆ. ಆದರೆ, ಬೆಳಗಾವಿ ನಗರದ ಕೆಲ ಭಾಗಗಳಲ್ಲಿ ರಸ್ತೆಗಳು ಮಳೆಯಿಂದಾಗಿ ಅಕ್ಷರಶಃ ಕೆಸರು ಗದ್ದೆಯಂತಾಗಿವೆ.

    ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ಉದ್ಯಮಬಾಗ್ ರಸ್ತೆಗಳಂತೂ ಸಂಪೂರ್ಣ ಹದಗೆಟ್ಟು ಹೋಗಿವೆ. ಕಾರ್ಮಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

    ನೆರೆ ಸೃಷ್ಟಿಸಿದ್ದ ಅವಾಂತರ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ನಾಲಾ ಪ್ರವಾಹದಿಂದ ನಗರದಲ್ಲಿ 166 ಕಿ.ಮೀ. ರಸ್ತೆ, 40.49 ಕಿ.ಮೀ. ನಾಲಾ, 122 ಕಿ.ಮೀ. ಚರಂಡಿ, 2.5 ಕಿ.ಮೀ. ಒಳಚರಂಡಿ ಸೇರಿ ವಿವಿಧ ಮೂಲ ಸೌಕರ್ಯ ಸಂಪೂರ್ಣ ಹಾಳಾಗಿದ್ದವು. ಆದರೆ, ವರ್ಷ ಕಳೆದರೂ ರಸ್ತೆಗಳು ಮಾತ್ರ ಸುಧಾರಣೆ ಆಗಿಲ್ಲ. ಈ ವರ್ಷ ಮತ್ತೆ ಧಾರಾಕಾರ ಮಳೆ ಆರಂಭವಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಉದ್ಯಮಬಾಗ್ ಕೈಗಾರಿಕೆ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಬಿದ್ದ ದೊಡ್ಡ ದೊಡ್ಡ ಹೊಂಡಗಳಲ್ಲಿ ಮಳೆ ನೀರು, ಕೊಳಚೆ ಸಂಗ್ರಹಗೊಂಡಿದೆ.

    ಕಾರ್ಮಿಕರ ಕೊರತೆ: ಕಳೆದ ವರ್ಷ ಸಂಭವಿಸಿದ ಬಳ್ಳಾರಿ ನಾಲಾ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ನಗರದ ರಸ್ತೆ, ಚರಂಡಿ, ನಾಲಾ ಹಾನಿಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಹೀಗಾಗಿ ಈಗಾಗಲೇ ಮಹಾನಗರ ಪಾಲಿಕೆಯು ಅಭಿವೃದ್ಧಿ ಕಾಮಗಾರಿಗಾಗಿ ಕ್ರಿಯಾಯೋಜನೆ ರೂಪಿಸಿದ್ದು, ಟೆಂಡರ್ ಅಂತಿಮ ಹಂತದಲ್ಲಿದೆ. ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ಜರುಗಿಸಲಾಗುವುದು. ಕೆಲವೆಡೆ ಕಾರ್ಮಿಕರ ಕೊರತೆಯಿಂದ ಕಾಮಗಾರಿ ಕೈಗೊಂಡಿಲ್ಲ ಎಂದು ಪಾಲಿಕೆ ಇಂಜಿನಿಯರ್‌ಗಳು ತಿಳಿಸಿದ್ದಾರೆ.
    ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಉದ್ಯಮಬಾಗ್ ಪ್ರದೇಶಕ್ಕೆ ವಿವಿಧ ಜಿಲ್ಲೆಗಳಿಂದ, ನೆರೆಯ ರಾಜ್ಯಗಳಿಂದ ವ್ಯಾಪಾರ-ವಹಿವಾಟಿಗಾಗಿ ಉದ್ಯಮಿಗಳು ಆಗಮಿಸುತ್ತಾರೆ. ಅಲ್ಲದೆ, ಸಾಮಗ್ರಿ ಸಾಗಣೆ ಹಾಗೂ ಪೂರೈಕೆಗಾಗಿ ದಿನನಿತ್ಯ ಹಲವು ವಾಹನಗಳು ಓಡಾಡುವುದರಿಂದ ರಸ್ತೆ ಮತ್ತಷ್ಟು ಹದಗೆಡುತ್ತಿವೆ. ವರ್ಷದಿಂದ ಈ ಅವ್ಯವಸ್ಥೆ ಇದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದು ಸ್ಥಳೀಯರ ಅಳಲು. ನಾಲ್ಕೈದು ವರ್ಷಗಳಿಂದ ಇಲ್ಲಿ ಸಮರ್ಪಕವಾದ ರಸ್ತೆ, ಚರಂಡಿ, ಒಳಚರಂಡಿ ನಿರ್ಮಿಸಿಲ್ಲ. ಹೀಗಾಗಿ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆಯೇ ಹರಿಯುವಂತಾಗಿದೆ.

    ಕೆಲವೆಡೆ ನೀರು ನಿಂತಿರುವುದರಿಂದ ಅಲ್ಲಿರುವ ತಗ್ಗು-ಗುಂಡಿಗಳ ಬಗ್ಗೆ ತಿಳಿಯದೆ ವಾಹನ ಸಂಚಾರಕ್ಕೆ ತೊಡಕಾಗಿದೆ. ಅದರಲ್ಲೂ ಬೈಕ್ ಸವಾರರು ನಿಯಂತ್ರಣ ತಪ್ಪಿ ಬೀಳುವ ದುಸ್ಥಿತಿ ಸೃಷ್ಟಿಯಾಗಿದೆ ಎಂದು ಸ್ಥಳೀಯ ಉದ್ಯಮಿದಾರರು, ಕಾರ್ಮಿಕರು ದೂರಿದ್ದಾರೆ.

    ಬೆಳಗಾವಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಉದ್ಯಮಬಾಗ್ ಕೈಗಾರಿಕೆ ಪ್ರದೇಶ ಸೇರಿ ವಿವಿಧೆಡೆ ಹಾಳಾಗಿರುವ ರಸ್ತೆ, ಚರಂಡಿಗಳ ದುರಸ್ತಿ ಕೆಲಸ ಶೀಘ್ರ ಆರಂಭವಾಗಲಿದೆ.
    | ಕೆ.ಎಚ್. ಜಗದೀಶ ಆಯುಕ್ತ ಮಹಾನಗರ ಪಾಲಿಕೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts