More

    ಕೌಶಲಯುತ ಪೀಳಿಗೆಯಿಂದ ಅಭಿವೃದ್ಧಿ

    ಬೆಳಗಾವಿ: ಯಾವುದೇ ಒಂದು ಕಂಪನಿಯ ಉತ್ಪನ್ನ ಹೆಚ್ಚಾದರೆ ದೇಶ ಅಭಿವೃದ್ಧಿ ಹೊಂದಿದೆ ಎಂದು ಭಾವಿಸಬಾರದು. ಯುವ ಪೀಳಿಗೆ ಎಷ್ಟು ಕ್ರೀಯಾಶೀಲ ವಾಗಿದ್ದಾರೆ ಹಾಗೂ ಕೌಶಲಯುತ ಮಾನವ ಸಂಪನ್ಮೂಲ ಎಷ್ಟಿದೆ ಎಂಬುದು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

    ಇಲ್ಲಿನ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಆರಂಭಿಸುತ್ತಿರುವ ತಾಂತ್ರಿಕ ವಿಷಯಗಳಲ್ಲಿ ವಸತಿ ಸಹಿತ ಬಿ.ಟೆಕ್ ಹಾಗೂ ಸೈಬರ್ ಸೆಕ್ಯೂರಿಟಿ ಪಿಜಿ ಡಿಪ್ಲೊಮಾ ಕೋರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಹೆಚ್ಚು ವೃತ್ತಿಪರತೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ನೂತನ ಕೋರ್ಸ್‌ಗಳನ್ನು ಆರಂಭಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಉಪನ್ಯಾಸಕರು ಹಣಕಾಸಿನ ವ್ಯವಹಾರಕ್ಕೆ ಆದ್ಯತೆ ನೀಡುವ ಔದ್ಯೋಗಿಕ ಮನೋಧೋರಣೆಗೆ ಸೀಮಿತರಾಗದೆ ಸಾಮಾಜಿಕ ಹಾಗೂ ಮಾನವೀಯ ಮೌಲ್ಯ ಅಳವಡಿಸಿಕೊಂಡು ಬೋಧನೆ ಮಾಡಬೇಕು. ಕೋರ್ಸ್‌ಗಳ ಉದ್ದೇಶ, ಆಸಕ್ತಿ, ಕಾಳಜಿ ಹಾಗೂ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ವಿಭಿನ್ನ ಹಾಗೂ ಪರಿಣಾಮಕಾರಿಯಾಗಿ ಮಾಡುವ ಕೆಲಸವು ಆ ಕಾರ್ಯದ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

    ಇದಕ್ಕೂ ಮೊದಲು ತೆರೆದ ವಾಹನದಲ್ಲಿ ವಿಟಿಯುನ ಇಡೀ ಕ್ಯಾಂಪಸ್ ವೀಕ್ಷಿಸಿ, ಕ್ಯಾಂಪಸ್ ಅತ್ಯಾಕರ್ಷಕವಾಗಿ ನಿರ್ವಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ಹಣಕಾಸು ವಿಭಾಗದ ಅಧಿಕಾರಿ ಎಂ.ಎ.ಸಪ್ನಾ, ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿ ಇದ್ದರು. ಪ್ರೊ. ಆರ್.ಆರ್. ಮಾಳಗಿ ವಂದಿಸಿದರು. ಎಸ್.ಆರ್. ಭೂಸನೂರ ನಿರೂಪಿಸಿದರು.

    ಕೋರ್ಸ್‌ಗಳಿಗೆ ಟಿಸಿಎಸ್ ಸಹಯೋಗ

    ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ಸ್(ಟಿಸಿಎಸ್), ಕೇಂದ್ರ ಸರ್ಕಾರ ಸ್ವಾಮ್ಯದ ಪ್ರತಿಷ್ಠಿತ ಆರ್‌ಡಿ ಸಂಸ್ಥೆ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿಎಂಟಿಐ) ಮತ್ತು ಎಂ ಟ್ಯಾಬ್‌ಗಳೊಂದಿಗೆ ಶೈಕ್ಷಣಿಕ ಹಾಗೂ ಸಂಶೋಧನಾ ಒಪ್ಪಂದ ಮಾಡಿಕೊಂಡು 4 ವರ್ಷದ ವಸತಿ ಸಹಿತ ಇನ್ ಕ್ಯಾಂಪಸ್ ಬಿ.ಟೆಕ್ ಹಾಗೂ ತಾಂತ್ರಿಕ ವಿಷಯಗಳಾದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬಿಸಿನೆಸ್ ಸಿಸ್ಟಂ, ರೊಬೊಟಿಕ್ಸ್ ಆ್ಯಂಡ್ ಆಟೋಮೇಷನ್ ಹಾಗೂ ಮೆಕ್ಯಾನಿಕಲ್ ಆ್ಯಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್ ಆರಂಭಿಸಲಾಗುತ್ತಿದ್ದು, ಇದಕ್ಕೆ ಎಐಸಿಟಿಇ ಅನುಮೋದನೆ ನೀಡಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts