More

    ಮಹದಾಯಿ ಹೋರಾಟಕ್ಕೆ ಆರು ವರ್ಷ

    ರಾಜು ಹೊಸಮನಿ ನರಗುಂದ

    ಜೀವ ಜಲಕ್ಕಾಗಿ ಬಂಡಾಯದ ನಾಡು ನರಗುಂದದಲ್ಲಿ ರೈತರು ನಡೆಸುತ್ತಿರುವ ಮಹದಾಯಿ, ಕಳಸಾ-ಬಂಡೂರಿ ನಿರಂತರ ಹೋರಾಟ ಜು. 16ಕ್ಕೆ 6 ವರ್ಷ ಭರ್ತಿಯಾಗಲಿದೆ. ನ್ಯಾಯಾಧಿಕರಣವು ಕರ್ನಾಟಕ, ಗೋವಾ, ಮಹಾರಾಷ್ಟ್ರಕ್ಕೆ ನದಿ ನೀರು ಹಂಚಿಕೆ ಮಾಡಿದೆ. ಈ ಮಹತ್ವದ ಯೋಜನೆಗೆ ಅಧಿಸೂಚನೆ ಹೊರಡಿಸಿದರೂ ಮಲಪ್ರಭೆ ಒಡಲು ತುಂಬಿಲ್ಲ. ಹೀಗಾಗಿ, ಮಹದಾಯಿ ಅನುಷ್ಠಾನಕ್ಕೆ ಆಗ್ರಹಿಸಿದ ಅನ್ನದಾತರ ಕೂಗು ಇನ್ನೂ ನಿಂತಿಲ್ಲ.

    ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ 2015 ಜು. 16ರಂದು ರೈತ ಸೇನಾ ಕರ್ನಾಟಕ ಹೋರಾಟ ಸಮಿತಿಯಿಂದ ನರಗುಂದದಲ್ಲಿ ರೈತರ ಹೋರಾಟ ಪ್ರಾರಂಭವಾಯಿತು. ಉತ್ತರ ಕರ್ನಾಟಕ ಭಾಗದ 4 ಜಿಲ್ಲೆ 11 ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಯೋಜನೆ ಬೇಕು. ಆದರೆ, ರಾಜಕೀಯ ಇಚ್ಛಾಶಕ್ತಿ, ಸರ್ಕಾರಗಳ ನಿಷ್ಕಾಳಜಿಯಿಂದ ಯೋಜನೆಗೆ ಹಿನ್ನಡೆ ಉಂಟಾಗುತ್ತಿರುವುದು ಸುಳ್ಳಲ್ಲ.

    ಹೋರಾಟದ ಹಾದಿ: ರೈತ ಹೋರಾಟ ಸಮಿತಿಯಿಂದ 2012ರಲ್ಲಿ ಮಹದಾಯಿ ಯೋಜನೆಗೆ ರಥಯಾತ್ರೆ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 2015ರ ಆಗಸ್ಟ್​ನಲ್ಲಿ ಅಂದಿನ ಸಚಿವರು, ಶಾಸಕರು, ರೈತ ಮುಖಂಡರ ನೇತೃತ್ವದಲ್ಲಿ ಬೆಂಗಳೂರಲ್ಲಿ ಸಭೆ ನಡೆಯಿತು. 2015 ಆ. 24ರಂದು ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವಪಕ್ಷ ನಿಯೋಗ ತೆರಳಿ ಮಹದಾಯಿ ನೀರಿನ ವಿವಾದ ಇತ್ಯರ್ಥಪಡಿಸಲು ಕೋರಲಾಯಿತು. ವಿವಾದ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡು ಹಲವಾರು ಘಟನೆಗಳು ನಡೆದ ಬಳಿಕ 2015 ಆ. 27ರಿಂದ ಹೋರಾಟ ತೀವ್ರಗೊಂಡಿತು. ಬೆಳಗಾವಿ ಸುವರ್ಣಸೌಧದ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಯಾವಗಲ್ಲ ಗ್ರಾಮದ ರೈತ ಧರ್ಮಣ್ಣ ತಹಶೀಲ್ದಾರ ಮೃತಪಟ್ಟರು. ಇದರಿಂದ ರೈತರ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಹೋದವು. 2015 ಸೆ. 29ರಿಂದ ರೈತರು ಕೂಡಲಸಂಗಮದಿಂದ ಕಣಕುಂಬಿಯವರೆಗೆ 750 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಯೋಜನೆಗೆ ಆಗ್ರಹಿಸಲಾಯಿತು.

    ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ಉಪವಾಸ ಧರಣಿ, ಹುಬ್ಬಳ್ಳಿಯಲ್ಲಿ ರೈಲ್ ರೋಖೋ, ರಸ್ತೆ ತಡೆ, ಆಮರಣಾಂತ ಉಪವಾಸ, ಸರ್ವಧರ್ಮ ಗುರುಗಳ ನೇತೃತ್ವದಲ್ಲಿ 2016 ಅ. 17ರಂದು ವೀರೇಶ ಸೊಬರದಮಠ ಅವರಿಂದ ಹೋರಾಟದ ಸನ್ಯಾಸ ದೀಕ್ಷೆ ಸ್ವೀಕಾರ, ರೈತ ಮುಖಂಡರ ಮೇಲೆ ಹಲ್ಲೆ, ನಂದೀಶ ಮಠದ ಅವರಿಂದ ಹೋರಾಟ ವೇದಿಕೆಯಲ್ಲಿ ವಿಷ ಸೇವನೆ, ಕರಕೀಕಟ್ಟಿಯ ರೈತ ಮುತ್ತಣ್ಣ ತಿರ್ಲಾಪೂರ ಚಾಕು ಚುಚ್ಚಿಕೊಂಡು ಆಸ್ಪತ್ರೆಗೆ ದಾಖಲಾದರು. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 11 ರೈತರು ಪ್ರಾಣವನ್ನೇ ಕಳೆದುಕೊಂಡರು. ಆದರೆ, ಇದಕ್ಕೆ ಕ್ಯಾರೆ ಅನ್ನದ ಸರ್ಕಾರ ಮೂವರು ರೈತ ಕುಟುಂಬಗಳಿಗೆ ಮಾತ್ರ ಪರಿಹಾರ ಘೊಷಿಸಿ ಕೈ ತೊಳೆದುಕೊಂಡಿದೆ.

    ರಾಜ್ಯಕ್ಕೆ 13.5 ಟಿಎಂಸಿ ಕುಡಿಯುವ ನೀರನ್ನು ಹಂಚಿಕೆ ಮಾಡಿ ನ್ಯಾಯಾಧಿಕರಣ 2018ರ ಫೆಬ್ರವರಿಯಲ್ಲಿ ತೀರ್ಪು ಪ್ರಕಟಿಸಿತು. ಕೇಂದ್ರ ಸರ್ಕಾರವೂ ಯೋಜನೆಗೆ ಅಧಿಸೂಚನೆ ಹೊರಡಿಸಿದೆ. ಆದರೆ, ಉದ್ದೇಶಿತ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಈ ಎಲ್ಲದರ ಮಧ್ಯೆ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ, ಮತ್ತೊಂದು ಸುತ್ತಿನ ಗಮನ ಸೆಳೆಯುವ ಹೋರಾಟದ ಕುರಿತಾಗಿ ಎಲ್ಲ ರೈತ ಸಂಘಟನೆಗಳು ಜು. 16ರಂದು ಸಭೆ ನಡೆಸಲಿವೆ.

    ರೈತರ ಮಹತ್ವದ ಸಭೆ ಇಂದು: ನರಗುಂದ ಪಟ್ಟಣದಲ್ಲಿ ರೈತ ಸೇನಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಆರಂಭಗೊಂಡ ಮಹದಾಯಿ ಕಳಸಾ-ಬಂಡೂರಿ ನಿರಂತರ ಹೋರಾಟ ಜು. 16ಕ್ಕೆ 6 ವರ್ಷ ಪೂರೈಸಿ, 7ನೇ ವರ್ಷಕ್ಕೆ ಪದಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜು. 16ರಂದು ಮಹದಾಯಿ ವೇದಿಕೆಯಲ್ಲಿ ಮಧ್ಯಾಹ್ನ 12ಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ, ನಂತರ ಪುರಸಭೆಯಿಂದ ಹೋರಾಟ ವೇದಿಕೆಯವರೆಗೆ ಅಚ್ಚುಕಟ್ಟು ಪ್ರದೇಶದ ಎಲ್ಲ ಹೋರಾಟಗಾರರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ವೀರೇಶ ಸೊಬರದಮಠ ಅಧ್ಯಕ್ಷತೆಯಲ್ಲಿ ಮಹದಾಯಿ ನದಿ ಜೋಡಣೆ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಮಹತ್ವದ ನಿರ್ಣಯಗಳ ಬಗ್ಗೆ ವೇದಿಕೆಯಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ನ್ಯಾಯಾಧಿಕರಣ ಕರ್ನಾಟಕಕ್ಕೆ 13.5 ಟಿಎಂಸಿ ಕುಡಿಯುವ ನೀರು ಹಂಚಿಕೆ ಮಾಡಿದೆ. 2002ರಲ್ಲಿ ಅಟಲ್​ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆ ಅಥವಾ ಬಳಕೆಗೆ ಅಡೆತಡೆ ನೀಡಬಾರದೆಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ಆದೇಶಿಸಿದೆ. ಆದರೆ, ತುಚ್ಛ ರಾಜಕಾರಣಿಗಳಿಂದಾಗಿ ಮಹತ್ವದ ಯೋಜನೆಗೆ ಹಿನ್ನೆಡೆ ಉಂಟಾಗಿದ್ದು, ಜು. 16 ಮತ್ತು 21ರಂದು ರೈತರ ಶಕ್ತಿ ಏನು ಎಂಬುದನ್ನು ಸರ್ಕಾರಕ್ಕೆ ತೋರಿಸಲಿದ್ದೇವೆ.

    | ವೀರೇಶ ಸೊಬರದಮಠ ರೈತಸೇನಾ ಸಂಘಟನೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts