More

    ಅಂದು ಭಯಾನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ…ಇಂದು ಸಂಪೂರ್ಣ ಗುಣಮುಖ; ಸರ್ಜರಿಯ ಕ್ಷಣವನ್ನು ವಿವರಿಸಿದ ವೈದ್ಯರು

    ನವದೆಹಲಿ: 19 ವರ್ಷದ ಯುವಕನೋರ್ವನ ಬೆನ್ನಿಗೆ ಚುಚ್ಚಿದ್ದ 6 ಇಂಚು ಉದ್ದದ ಮೊನಚಾದ ಕಬ್ಬಿಣದ ರಾಡ್​​ನ್ನು ದೆಹಲಿ ಆಸ್ಪತ್ರೆಯೊಂದರ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಕಬ್ಬಿಣದ ರಾಡ್​ ಯುವಕನ ಬೆನ್ನಿಗೆ ಚುಚ್ಚಿ, ಎದೆಯವರೆಗೆ ತಲುಪಿತ್ತು.

    ಮುಕುಲ್​ ಎಂಬಾತನಿಗೆ ಮೂರು ತಿಂಗಳ ಹಿಂದೆಯೇ ಸರ್ಜರಿ ಮಾಡಿದ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಮುಕುಲ್​ ಬೆನ್ನಿಗೆ ಆರು ಇಂಚು ಉದ್ದದ, ಸ್ವಲ್ಪ ದಪ್ಪನೆಯ ಕಬ್ಬಿಣದ ಮೊಳೆಯಾಕಾರದ ವಸ್ತು ಚುಚ್ಚಿಕೊಂಡ  ಸ್ಥಿತಿಯಲ್ಲಿ ನವೆಂಬರ್ 15ರಂದು ದೆಹಲಿ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಾಗಿದ್ದ. ಆ ಸರಳು ಸ್ವಲ್ಪ ಮಟ್ಟಿಗೆ ಬೆನ್ನಿನಿಂದ ಹೊರ ಚಾಚಿತ್ತು. ಒಳಗಿನ ಅಂಗಗಳ ಮೂಲಕ ಹೋಗಿ ಎದೆಯ ಭಾಗಕ್ಕೆ ನೆಟ್ಟಿತ್ತು.

    ಯುವಕನನ್ನು ಸಿಟಿ ಸ್ಕ್ಯಾನ್​ಗೆ ಒಳಪಡಿಸಿದಾಗ ಎದೆಯ ಬಲಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ್ದು ಗೊತ್ತಾಯಿತು. ಕಬ್ಬಿಣದ ಸರಳಿನ ಮೊನಚಾದ ಭಾಗ ಪ್ರಮುಖ ರಕ್ತನಾಳಕ್ಕಿಂತ ಚೂರೇಚೂರು ಅಂತರದಲ್ಲಿ ಇತ್ತು. ಕೂಡಲೇ ಆತನನ್ನು ಹೃದಯ ಸಂಬಂಧಿ ಚಿಕಿತ್ಸೆ ನೀಡುವ ಐಸಿಯುವಿಗೆ ಶಿಫ್ಟ್ ಮಾಡಲಾಯಿತು ಮತ್ತು ತುರ್ತಾಗಿ ಸರ್ಜರಿಗೆ ಒಳಪಡಿಸಲಾಯಿತು.

    ಯುವಕನ ಬೆನ್ನಿಗೆ ಕಬ್ಬಿಣದ ರಾಡ್​ ಹೊಕ್ಕಿದ್ದರಿಂದ ಆತನನ್ನು ಹೊಟ್ಟೆಯ ಮೇಲೆ ಬೋರಲಾಗಿ ಮಲಗಿಸಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಅದು ದೊಡ್ಡ ಸವಾಲಾಗಿತ್ತು. ಇನ್ನೊಂದೇನೆಂದರೆ ಇಂತಹ ಪ್ರಕರಣಗಳಲ್ಲಿ ರೋಗಿಯನ್ನು ಆಪರೇಶನ್​ ಥಿಯೇಟರ್​ಗೆ ಕರೆದುಕೊಂಡು ಹೋಗುವವರೆಗೂ ಅವನ ದೇಹದೊಳಗೆ ಹೊಕ್ಕಿದ್ದ ಸರಳನ್ನು ನಾವು ಮುಟ್ಟುವಂತಿಲ್ಲ, ಒಮ್ಮೆಲೇ ತೆಗೆಯುವಂತಿಲ್ಲ ಎಂದು ವೈದ್ಯರು, ಯುವಕನಿಗೆ ಸರ್ಜರಿ ಮಾಡಿದ ಕ್ಷಣವನ್ನು ವಿವರಿಸಿದ್ದಾರೆ.

    ದೇಹದೊಳಗೆ ಹೊಕ್ಕಿರುವ ಕಬ್ಬಿಣದ ಸರಳು ಒತ್ತಡ ಉಂಟು ಮಾಡುವ ಮೂಲಕ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ. ಅದನ್ನು ಮುಂಜಾಗ್ರತೆ ಇಲ್ಲದೆ ದೇಹದಿಂದ ಹೊರತೆಗೆದರೆ ವಿಪರೀತ ರಕ್ತ ಹೋಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಆ ಯುವಕ ಜೀವವನ್ನೇ ಕಳೆದುಕೊಳ್ಳಬಹುದು. ಸರ್ಜರಿ ಸಮಯದಲ್ಲಿ ರಕ್ತಸ್ರಾವ ಆಗುತ್ತದೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ರಕ್ತವನ್ನು ಸಿದ್ಧ ಮಾಡಿಟ್ಟುಕೊಂಡಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

    ಮಹಾ ಅಪಧಮನಿ ಹಾಗೂ ಶ್ವಾಸಕೋಶದ ಎಡಭಾಗದಲ್ಲಿ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಹೆಪ್ಪುಗಟ್ಟಿತ್ತು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಎದೆ ಭಾಗದ ಎರಡು ಪಕ್ಕೆಲುಬುಗಳ ಮಧ್ಯೆ ಮುಂಭಾಗದಿಂದ ಹಿಂಭಾಗಕ್ಕೆ ಸೀಳಲಾಯಿತು. ಬಳಿಕ ಎದೆಯೊಳಗೆ ರಕ್ತ ಮತ್ತು ಗಾಳಿ ಸೇರದೆ ಇರುವಂತೆ ಚೆಸ್ಟ್​ ಟ್ಯೂಬ್ ಅಳವಡಿಸಲಾಯಿತು. ಆತನಿಗೆ ಆಕ್ಸಿಜನ್​ ವ್ಯವಸ್ಥೆ ಮಾಡಿ ಕಬ್ಬಿಣದ ರಾಡ್​ನ್ನು ಹೊರತೆಗೆದು, ಬಳಿಕ ಎಲ್ಲ ಗಾಯಗಳಿಗೂ ಹೊಲಿಗೆ ಮಾಡಿದ್ದೆವು ಎಂದು ವೈದ್ಯರು ಆಪರೇಶನ್​ ಮಾಡಿದ ರೀತಿಯನ್ನು ವಿವರಿಸಿದರು.

    ಆಪರೇಶನ್ ಬಳಿಕ ವೈದ್ಯಕೀಯ ಚಿಕಿತ್ಸೆ ಮುಂದುವರಿಸಲಾಗಿತ್ತು. ಆತನನ್ನು ನವೆಂಬರ್​ 18ರಂದು ಡಿಸ್​ಚಾರ್ಜ್​ ಮಾಡಿ ಪರಿಪೂರ್ಣ ವಿಶ್ರಾಂತಿಗೆ ಸೂಚಿಸಿದ್ದೆವು. ಇದೀಗ ಆತ ಸಂಪೂರ್ಣ ಗುಣಮುಖನಾಗಿದ್ದಾನೆ. ಆತನ ವೈದ್ಯಕೀಯ ವರದಿ ಪ್ರಕಾರ ದೇಹದೊಳಗೆ ಕೂಡ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಮಾಡಿದ ಸರ್ಜರಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಗೊತ್ತಾದ ಬಳಿಕ ವೈದ್ಯರು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇನ್ನು ಮುಕುಲ್​ ತಂದೆ ಕೂಡ ತಮ್ಮ ಮಗನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts