More

    ಲಿಂಗಧಾರಿಗಳಿಗೆ ಬೇಕಿಲ್ಲ ದೇಗುಲದ ಹಂಗು

    ಸಿರಿಗೆರೆ: ಬಸವಣ್ಣ ಅವರ ಕಲ್ಪನೆಯ ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿಕೊಂಡ ಭಕ್ತರು ಲಿಂಗಪೂಜೆಯಲ್ಲಿ ದೇವರನ್ನು ಕಾಣಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಶಿವರಾತ್ರಿ ಅಂಗವಾಗಿ ತರಳಬಾಳು ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ವಿಶ್ವಬಂಧು ಮರುಳಸಿದ್ದೇಶ್ವರ ದೊಣೆ ಕ್ಷೇತ್ರ ಸಮಿತಿಯಿಂದ ಸಮೀಪದ ಸಿದ್ದನೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಷ್ಟಲಿಂಗ ಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಷ್ಟಲಿಂಗಧಾರಿಗಳಿಗೆ ಶಿವಾಲಯಕ್ಕೆ ಹೋಗುವ ಅವಶ್ಯಕತೆ ಇಲ್ಲ. ಅನಿವಾರ್ಯವಾದರೆ ದೇವಾಲಯದ ವಾಸ್ತುಶಿಲ್ಪದ ಸೌಂದರ್ಯದ ಸೊಬಗು ಸವಿಯಲು ಹೋಗಬಹುದು ಎಂದರು.

    ಇಷ್ಟಲಿಂಗ ಧರಿಸಿದವರು ಭೂತ, ಪಿಶಾಚಿಗಳ ಮೂಢನಂಬಿಕೆ ತೊಡೆದುಹಾಕಬೇಕು. ಮನಸ್ಸಿನ ಭೀತಿಯೇ ಭೂತ ಪಿಶಾಚಿಗಳಾಗಿವೆ ಎಂಬ ಸರಳ ಸತ್ಯ ಅರಿತು ಬದುಕಬೇಕು. ಯಂತ್ರ, ತಂತ್ರ, ತಾಯತ ದಾರಗಳ ಮೂಢನಂಬಿಕೆಯಿಂದ ಹೊರಬರಬೇಕು ಎಂದು ತಿಳಿಸಿದರು.

    ಸಿರಿಗೆರೆ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ಬಸವಣ್ಣ ಅವರು ಹೆಣ್ಣು, ಗಂಡಿನ ಮಧ್ಯೆ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಪೂಜಾ ಸ್ವಾತಂತ್ರ್ಯ ಕೊಟ್ಟಿದ್ದಾರೆ ಎಂದರು. ತರಳಬಾಳು ಕ್ಷೇಮಾಭಿವೃದ್ಧಿ ಸಮಿತಿಯ ಶಿವಕುಮಾರಸ್ವಾಮಿ ಕುರ್ಕಿ ಇದ್ದರು.

    ಪ್ರತಿ ತಿಂಗಳು ಇಷ್ಟಲಿಂಗ ಧಾರಣೆ: ಇನ್ಮುಂದೆ ಪ್ರತಿ ತಿಂಗಳು ವಿವಿಧ ಗ್ರಾಮಗಳಲ್ಲಿ ಇಷ್ಟಲಿಂಗ ಧಾರಣೆ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗುವುದು. ಬಸವಣ್ಣ ಅವರ ತತ್ವಾದರ್ಶಗಳು ಜನಸಾಮಾನ್ಯರಲ್ಲಿ ಜಾಗೃತರಾಗಲು ಇಂತಹ ಕಾರ್ಯ ಅವಶ್ಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts