More

    ಸಿರಿಧಾನ್ಯ ಬೆಳೆಗೆ ಆದ್ಯತೆ ಕೊಡಿ

    ಕಲಬುರಗಿ: ರಾಜ್ಯದ ಪ್ರತಿಯೊಬ್ಬ ರೈತ ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡಬೇಕು. ಇದರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ, ಮಿಲೆಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಡಾ.ಖಾದರ್ ವಲಿ ಹೇಳಿದರು.

    ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಿರಿಧಾನ್ಯದಲ್ಲಿ ಆರೋಗ್ಯದ ಗುಟ್ಟು ಆಡಗಿದ್ದು, ಇದು ನೀರಿಲ್ಲದೆ ಬೆಳೆಯಬಹುದಾದ ಬೆಳೆಯಾಗಿದೆ. ಜತೆಗೆ ಖರ್ಚು ಕಡಿಮೆ. ಆರಂಭದಲ್ಲಿ ಅಲ್ಪ ಪ್ರದೇಶದಲ್ಲಿ ಬೆಳೆದು ನಂತರ ಕೃಷಿ ಪ್ರದೇಶ ವಿಸ್ತರಿಸಬಹುದಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ರೈತರು ಶ್ರಮಿಸಬೇಕಿದೆ ಎಂದರು.

    ಕರ್ನಾಟಕದಲ್ಲಿ ಮಧುಮೇಹ, ರಕ್ತದೊತ್ತಡ, ನರರೋಗ, ಮಾನಸಿಕ ಕಾಯಿಲೆ, ಎಲುಬು ಕೀಲುಗಳ ಸಮಸ್ಯೆ, ಕೊಲೆಸ್ಟ್ರಾಲ್, ಥೈರಾಯಿಡ್, ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಪರಿಹಾರವಾಗಿ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡಬೇಕು. ಆಹಾರ ಪದಾರ್ಥ ಮತ್ತು ಅಡುಗೆ ಮನೆ ಬದಲಾಗಬೇಕು. ಆರೋಗ್ಯಕರ ಆಹಾರದಲ್ಲೂ ಸಾಕಷ್ಟು ನಮೂನೆಗಳಿವೆ. ಇದರಲ್ಲಿ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಂಡು, ಸುಧಾರಣೆಗೆ ಮುಂದಾಗಿ ಎಂದು ಕಿವಿಮಾತು ಹೇಳಿದರು.

    ಆಹಾರ, ನೀರು ಸೇರಿ ಎಲ್ಲವೂ ಕಲುಷಿತಗೊಂಡಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೂರಾರು ವರ್ಷಗಳ ಹಿಂದೆ ಆರೋಗ್ಯಕರ ಆಹಾರ ಸೇವನೆಯಿಂದ ಜನ ಗಟ್ಟಿಮುಟ್ಟಾಗಿ ಇರುತ್ತಿದ್ದರು. ಆ ಸಂದರ್ಭಗಳಲ್ಲಿ ಆಸ್ಪತ್ರೆಗಳಿಯೇ ಇರಲಿಲ್ಲ. ಸಣ್ಣಪುಟ್ಟ ರೋಗ ನಿವಾರಣೆಗೆ ಮನೆ ಮದ್ದು ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು. ಇತ್ತೀಚಿನ ಒತ್ತಡದ ಬದುಕು ಹಾಗೂ ಫಾಸ್ಟ್ಫುಡ್ ಸೇವನೆಯಿಂದ ಆಯುಷ್ಯ ತಗ್ಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಪ್ರಮುಖರಾದ ಶಾಂತರೆಡ್ಡಿ, ಅನುಸೂಯಾ ಹೂಗಾರ, ಎಚ್.ಸಿ.ಪಾಟೀಲ್, ಮಾರ್ಥಂಡ ಶಾಸ್ತ್ರೀ, ಶೈಲಜಾ ಶೆಳ್ಳಗಿ, ಎಸ್.ಎಸ್.ಹಿರೇಮಠ ಸೇರಿ ೬೦ಕ್ಕೂ ಹೆಚ್ಚು ರೈತರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ರಾಜನಾಳ ಸ್ವಾಗತಿಸಿದರು. ರೇಣುಕಾ ಬಂಡಿ ಪ್ರಾರ್ಥಿಸಿದರು. ಪ್ರಿಯಾಂಕಾ ಬಾಗೋಡಿ ನಿರೂಪಣೆ ಮಾಡಿದರು.

    ಕಲ್ಯಾಣದಲ್ಲಿ ಆರೋಗ್ಯ ಕೃಷಿ ನಡೆಯಲಿ: ಆರಂಭದಲ್ಲಿ ವಿಘ್ನಗಳು ಸಾಮಾನ್ಯ. ಆದರೆ ಇದನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು. ದೇಶದ ಅನೇಕ ಭಾಗಗಳಲ್ಲಿ ಸಣ್ಣ ರೈತರು ಸಿರಿಧಾನ್ಯ ಬೆಳೆಯುವ ಮೂಲಕ ಅಪಾರ ಬೆಳವಣಿಗೆ ಕಂಡಿದ್ದಾರೆ. ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕದ ರೈತಾಪಿ ವರ್ಗ ಮನಸ್ಸು ಮಾಡಬೇಕು. ಒಬ್ಬ ರೈತ ಸಿರಿಧಾನ್ಯ ಬೆಳೆಯಲು ಮುಂದೆ ಬಂದರೆ, ಹಂತ- ಹಂತವಾಗಿ ಇನ್ನುಳಿದ ರೈತರು ಇತ್ತ ಚಿತ್ತ ಹರಿಸುತ್ತಾರೆ ಎಂದು ಸಂವಾದದಲ್ಲಿ ಡಾ.ಖಾದರ್ ವಲಿ ಸಲಹೆ ನೀಡಿದರು.

    ಸಿರಿಧಾನ್ಯ ಬೆಳೆಯುವ ರೈತರು ಆರಂಭದಲ್ಲಿಯೇ ಭಾರೀ ಪ್ರಮಾಣದ ಉತ್ಪಾದನೆ ನಿರೀಕ್ಷೆ ಮಾಡುವುದು ಬೇಡ. ಉತ್ಪಾದನೆ ಹಂತ- ಹಂತವಾಗಿ ದ್ವಿಗುಣಗೊಳ್ಳುತ್ತದೆ. ಆ ಮೂಲಕ ಮಾರುಕಟ್ಟೆಯಲ್ಲಿ ಇದರ ಲಾಭ ಪಡೆದುಕೊಳ್ಳಬಹುದು.
    | ಡಾ.ಖಾದರ್ ವಲಿ, ಮಿಲೆಟ್ ಮ್ಯಾನ್ ಆಫ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts