More

    ಸ್ಪರ್ಧೆಯಿಂದ ಹಿಂದೆ ಸರಿದರೆ ಸಿಂಗದೂರು ದೇವಿ ಮೆಚ್ಚುತ್ತಾಳಾ: ಈಶ್ವರಪ್ಪ

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಧುಮುಕಿ ಆಗಿದ್ದು ಹಿಂದೆ ಸರಿಯುವ ಮಾತೇ ಇಲ್ಲ. ಮುಂದೆ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಹಿಂದಿರುಗುವ ಪ್ರಶ್ನೆಯೂ ಇಲ್ಲ. ಸಿಂಗದೂರು ದೇವಿ ಆಶೀರ್ವಾದವೂ ಸಿಕ್ಕಿದ್ದು ಸ್ಪರ್ಧೆಯಿಂದ ಈಗ ಹಿಂದೆ ಸರಿದರೆ ದೇವಿ ಮೆಚ್ಚುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಮಲ್ಲೇಶ್ವರ ಗುಂಡಪ್ಪಶೆಡ್‌ನಲ್ಲಿ ಗುರುವಾರ ಶಿವಮೊಗ್ಗ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆ ನಡೆಸಿದ ಅವರು, ಶ್ರೀ ಕ್ಷೇತ್ರ ಸಿಂಗದೂರು ಧರ್ಮದರ್ಶಿ ರಾಮಪ್ಪನ ಅವರು ನನ್ನ ಸ್ಪರ್ಧೆ ಬಗ್ಗೆ ದೇವಿಗೆ ಕೇಳಿದ್ದಾರೆ. ಅಲ್ಲೇ ಮಾರುತಿ ಪ್ರಸಾದವೂ ದೊರೆತಿದೆ. ಶ್ರಮ ಹಾಕಿದರೆ ಚುನಾವಣೆಯನ್ನು ಗೆಲ್ಲುವುದಾಗಿ ಅರ್ಚಕರು ಹೇಳಿದ್ದಾರೆ. ಹಾಗಾಗಿ ದೇವಿಗೆ ಸುಳ್ಳು ಹೇಳಿ ಅಖಾಡದಿಂದ ವಾಪಾಸ್ಸಾಗುವುದಿಲ್ಲ ಎಂದರು.
    ಕೇವಲ ಚುನಾವಣೆಗೆ ಸ್ಪರ್ಧೆ ಮಾಡುವುದು ಮಾತ್ರವಲ್ಲ. ಈ ಬಾರಿ ಗೆಲ್ಲಲೇಬೇಕಿದೆ. ಯಡಿಯೂರಪ್ಪ ಮತ್ತು ನೀವು ಅಣ್ಣ ತಮ್ಮನ ರೀತಿ ಇದ್ದೀರೆಂದು ಕೆಲ ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ಅಣ್ಣ ಸರಿ ದಾರಿಯಲ್ಲಿಲ್ಲ ಎನ್ನುವ ಕಾರಣಕ್ಕೆ ಅವರ ಪುತ್ರನ ವಿರುದ್ಧ ಸ್ಪರ್ಧೆ ಮಾಡಿದ್ದೇನೆ ಎಂದು ನನ್ನನ್ನು ಪ್ರಶ್ನಿಸಿದವರಿಗೆ ಹೇಳಿದ್ದೇನೆ. ಇನ್ನು ಕೆಲವರು ಈಡಿಗರು ಮತ್ತು ಲಿಂಗಾಯಿತರು ಜಿಲ್ಲೆಯಲ್ಲಿ ಹೆಚ್ಚಿನ ಮತದಾರರಿದ್ದಾರೆ. ನಿಮ್ಮ ಮತ ಎಲ್ಲಿ ಎಂದು ಕೇಳಿದ್ದಾರೆ. ನಾನು ಜಾತಿ ಪರಿಗಣಿಸಿಲ್ಲ. ನಾವೆಲ್ಲರೂ ಹಿಂದೂಗಳು, ಹಿಂದೂ ರಕ್ಷಣೆಗಾಗಿ ಸ್ಪರ್ಧೆ ಮಾಡುತ್ತಿದ್ದೇನೆಂದು ಹೇಳಿರುವುದಾಗಿ ತಿಳಿಸಿದರು.
    ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ಈಶ್ವರಪ್ಪ ಎಲ್ಲರಿಗೂ, ಎಲ್ಲ ಸಮಾಜಕ್ಕೂ ಬೇಕಾದ ರಾಜಕಾರಣಿ. ಅವರನ್ನು ಒಪ್ಪುವಂತಹ ಅಭಿಮಾನಿ ಬಳಗವೇ ಇದೆ. ಈಶ್ವರಪ್ಪ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ. ಹಿಂದುತ್ವ, ಧರ್ಮದ ಹೆಸರಿನಲ್ಲಿ ಈಶ್ವರಪ್ಪ ನಮಗೆ ಪ್ರೇರಣೆ ಆಗಿದ್ದಾರೆ. ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದು ಅವರನ್ನು ಗೆಲ್ಲಿಸಿಯೇ ದೆಹಲಿಗೆ ಕಳುಹಿಸಬೇಕೆಂದು ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts