More

    ರಾಜಕೀಯ ಮೇಲಾಟ, ರೈತರಿಗೆ ಸಂಕಟ- ಶಾಸಕ, ಅಧಿಕಾರಿ ವಿರುದ್ಧ ಆಕ್ರೋಶ

    ಸಿಂಧನೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ತುಂಗಭದ್ರಾ ಎಡದಂಡೆ ನಾಲೆ ನೀರಿನ ವಿಚಾರದಲ್ಲಿ ರಾಜಕೀಯ ಮೇಲಾಟ ಮುನ್ನೆಲೆಗೆ ಬಂದಿದೆ. ನೀರಿನ ವಿಚಾರ ಯಾರಿಗೆ ರಾಜಕೀಯ ಲಾಭ ತರಲಿದೆ ಎನ್ನುವ ಚರ್ಚೆಗಳಿಗೆ ಚಾಲನೆ ಸಿಕ್ಕಿದೆ.

    ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೇಸಿಗೆ ಬೆಳೆಗೆ ನೀರಿನ ಕೊರತೆ ಎದುರಾಗಿದ್ದನ್ನೇ ರಾಜಕೀಯ ಅಸ್ತ್ರವಾಗಿ ಉಪಯೋಗಿಸಿಕೊಂಡು ಅಂದಿನ ಶಾಸಕರ ವಿರುದ್ಧ ಅಲೆ ಸೃಷ್ಟಿಸಲಾಗಿತ್ತು.

    ಈಗ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾಗುವುದರೊಂದಿಗೆ ತಾಲೂಕು ವ್ಯಾಪ್ತಿಯ ಉಪಕಾಲುವೆ ವ್ಯಾಪ್ತಿಯಲ್ಲಿ ನೀರಿನ ಹರಿಯುವಿಕೆ ಸ್ಥಗಿತಗೊಳಿಸಿ ಕೆಳ ಭಾಗಕ್ಕೆ ನೀರು ಕಳಿಸುವ ವಿಚಾರ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

    ಎಡದಂಡೆ 36 ಹಾಗೂ 54 ನೇ ಉಪಕಾಲುವೆಯ ಬಳಿ ಜಮಾಯಿಸಿದ್ದ ರೈತರು ಯಾವುದೇ ಕಾರಣಕ್ಕೂ ಉಪಕಾಲುವೆಗಳಲ್ಲಿ ನೀರು ಹರಿಯುವಿಕೆಯನ್ನು ಸ್ಥಗಿತಗೊಳಿಸುವಂತಿಲ್ಲ. ನೀರಿನ ಗೇಜ್ ಕಡಿಮೆ ಮಾಡಿ ಕೆಳ ಭಾಗಕ್ಕೆ ಹರಿಸಲು ಅವಕಾಶ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

    ಈ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಶಾಸಕ ವೆಂಕಟರಾವ ನಾಡಗೌಡ ಎಲ್ಲ ಉಪಕಾಲುವೆಗಳಲ್ಲಿ ನೀರು ಹರಿಯುವಿಕೆ ಸ್ಥಗಿತಗೊಳಿಸಿ ಕೆಳ ಭಾಗಕ್ಕೆ ನೀರು ಹರಿಸುವಂತೆ ಹೇಳಿದ್ದಾರೆಂದು ಆರೋಪಿಸಿ, ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

    ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಕೆಪೆಕ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ರೈತರ ಪರ ಧ್ವನಿಯೆತ್ತಿದ್ದಾರೆ.

    ಕಾಲುವೆ ಮೇಲಿನ ಪ್ರತಿಭಟನೆ ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವವರೆಗೆ ಮುಂದುವರೆಯಿತು. ಅಧಿಕಾರಿಗಳು ರೈತರ ಒತ್ತಡಕ್ಕೆ ಮಣಿದು ಉಪಕಾಲುವೆಗಳಿಗೆ ನೀರು ಹರಿಸುತ್ತಿದ್ದಾರೆ.

    ಕೃಷಿಕರಿಗೆ ಅನುಕೂಲ

    ರಾಜಕೀಯ ಮೇಲಾಟದಿಂದ ರೈತರಿಗೆ ಲಾಭವಾಗಿದ್ದು, ಉಪಕಾಲುವೆಗಳಿಗೆ ಎಂದಿನಂತೆ ನೀರು ಹರಿಯುವಂತಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಇಳಿಮುಖವಾಗಲು ಕಾರಣ ಏನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕು.

    ಇತಿಹಾಸದಲ್ಲಿ ಮೊದಲ ಬಾರಿಗೆ ಉಪಕಾಲುವೆಗಳಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ಕೆಳ ಭಾಗಕ್ಕೆ ನೀರು ಹರಿಸಲಾಗುತ್ತಿದೆ. ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಭತ್ತದ ಬೆಳೆಯಲಾಗಿದೆ ಎನ್ನುವ ಸಾಮಾನ್ಯ ಜ್ಞಾನವು ಇಲ್ಲ ಎಂದು ರೈತರ ಆಕ್ರೊಶ ವ್ಯಕ್ತಪಡಿಸಿದರು.

    ಮಾ.31 ರವರೆಗೆ ನೀರು ಪೊರೈಕೆ

    ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕಡಿಮೆ ಇದ್ದು, ಆಂಧ್ರಪ್ರದೇಶ ಕೋಟಾದ ನೀರು ಬಳಕೆಯಾಗಿದೆ. ಐಸಿಸಿ ಸಭೆ ನಿರ್ಧಾರದಂತೆಯೇ ಮಾ.31 ರವರೆಗೆ ಎಡದಂಡೆ ನಾಲೆಗೆ ನೀರು ಪೊರೈಕೆಯಾಗಲಿದೆ.

    ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಎಂ ಭೇಟಿಯಾಗಿ ಭದ್ರಾ ಜಲಾಶಯದಿಂದ 3 ಟಿಎಂಸಿ ನೀರು ಹರಿಸಲು ಮನವಿ ಮಾಡಿರುವುದಾಗಿ ಶಾಸಕ ವೆಂಕಟರಾವ ನಾಡಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts