More

    ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ; ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿಕೆ

    ಸಿಂಧನೂರು: ನನ್ನನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ನಾಯಕರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿಗಮ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ್ದರು. ಆರು ತಿಂಗಳ ಹಿಂದೆಯೇ ನನ್ನ ನೇಮಕ ಆಗಬೇಕಿತ್ತು. ಆದರೆ, ಯಾಕೆ ತಡವಾಯಿತೋ ಗೊತ್ತಿಲ್ಲ. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದು ಸಂತಸ ತಂದಿದೆ ಎಂದರು.

    13 ವರ್ಷ ಯಾವುದೇ ಅಧಿಕಾರ ಇರದಿದ್ದರೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜತೆಗಿದ್ದರು. ರಾಜಕೀಯ ಏರುಪೇರಿನಿಂದ ವಿವಿಧ ಪಕ್ಷಗಳಿಗೆ ಹೋಗಿ ಪುನಃ ಬಿಜೆಪಿಗೆ ಬಂದಾಗ ಹಣ ಪಡೆದಿದ್ದೇನೆ ಎಂಬ ಕಳಂಕ ನನ್ನ ಮೇಲೆ ಇತ್ತು. ನಿಗಮದ ಅಧ್ಯಕ್ಷ ಸ್ಥಾನ ಕೊಡದಿದ್ದರೆ ಆ ಆರೋಪ ಕಾರ್ಯಕರ್ತರ ಮನಸ್ಸಿನಲ್ಲಿರುತ್ತಿತ್ತು.

    ನಾನು ವಿಧಾನಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ನೀಡುವ ಭರವಸೆಯಿದೆ. ಶಾಸಕ ವೆಂಕಟರಾವ ನಾಡಗೌಡ ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಅನುದಾನ ಕೊಡುತ್ತಿರುವುದು ಬಿಜೆಪಿ ಸರ್ಕಾರ ಎಂಬುದನ್ನು ಮರೆಯಬಾರದು. ಗ್ರಾಮ ವಾಸ್ತವ್ಯ ಮಾಡುವ ನೈತಿಕತೆ ನಾಡಗೌಡರಿಗಿಲ್ಲ. ಹಂಪನಗೌಡ ಮತ್ತು ನಾಡಗೌಡ ಇಬ್ಬರೂ ಒಳ ಒಪ್ಪಂದ ಮಾಡಿಕೊಂಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆ.ವಿರೂಪಾಕ್ಷಪ್ಪ ದೂರಿದರು.

    ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ತಾಪಂ ಮಾಜಿ ಸದಸ್ಯ ಎಂ.ಗಂಗಾಧರ ಹೂಗಾರ, ತಾಲೂಕು ಕುರುಬ ಸಂಘದ ಕಾರ್ಯಾಧ್ಯಕ್ಷ ವೆಂಕೋಬ ಸಾಸಲಮರಿ,  ಪ್ರಮುಖರಾದ ಈರೇಶ ಇಲ್ಲೂರು, ಮಲ್ಲಯ್ಯ ಮಾಡಸಿರವಾರ ಇದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts