More

    ಅಳಿಯ ರಾಮರಾಯನ ಶಾಸನ ಪತ್ತೆ ; ಪುನರ್‌ಶೋಧ ಮಾಡಿದ ಡಾ.ಚನ್ನಬಸಪ್ಪ ವಲ್ಕಂದಿನ್ನಿ |s

    6 ಅಡಿ ಎತ್ತರ, 2 ಅಡಿ ಅಗಲದ ಕಣಶಿಲೆ ಇದು

    ಸಿಂಧನೂರು: ವಿಜಯನಗರದ ಅಳಿಯ ರಾಮರಾಯನ ಶಾಸನವನ್ನು ಸಂಶೋಧಕ ಡಾ.ಚನ್ನಬಸಪ್ಪ ವಲ್ಕಂದಿನ್ನಿ ಪುನರ್ ಶೋಧಿಸಿದ್ದಾರೆ.

    ನಗರದಿಂದ ಆಗ್ನೇಯ ದಿಕ್ಕಿಗೆ ನಾಲ್ಕು ಕಿಮೀ ದೂರದಲ್ಲಿ ಮುಲ್ಲಾರರೆಂಬ ಹೆಸರಿನ ಎರೆಹೊಲದ ಸರ್ವೆ ನಂಬರ್-908ರಲ್ಲಿ ಇದು ಪತ್ತೆಯಾಗಿದ್ದು, ಇದನ್ನು ಹೊಲದ ಬದುವಿನ ಮೇಲೆ ಉತ್ತರ ದಕ್ಷಿಣಾಭಿಮುಖವಾಗಿ ಇಡಲಾಗಿದೆ. ಈ ಶಾಸನ ಕಣಶಿಲೆಯಲ್ಲಿದ್ದು 30 ಸಾಲುಗಳಿಂದ ಕೂಡಿದೆ. 6 ಅಡಿ ಎತ್ತರ, 2 ಅಡಿ ಅಗಲ ಇರುವ ಶಾಸನದ ಮೇಲ್ಭಾಗದ ಎಡ ಬಲಗಳಲ್ಲಿ ಸೂರ್ಯ ಚಂದ್ರರಿದ್ದರೆ, ಮಧ್ಯ ಭಾಗದ ಮೇಲೆ ಕಿರುಗುತ್ತಿ, ಕೆಳ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಲಾಂಛನ ವರಾಹವಿದೆ. ಕೆಳ ಭಾಗದಲ್ಲಿನ ಶಾಸನವು ಶ್ರೀಹರಿ ಮತ್ತು ಗಣೇಶನನ್ನು ಸ್ತುತಿಸುತ್ತದೆ. ಇದು ಶಕ ವರ್ಷ 1482ನೇ ರೌದ್ರಿ ನಾಮ ಸಂವತ್ಸರದ ಶ್ರಾವಣ ಬ.10 ಎಂದಿದ್ದು, ಇದು 16-08-1560 ಶುಕ್ರವಾರಕ್ಕೆ ಸರಿ ಹೊಂದುವ ಮಾಹಿತಿ ಇದೆ.

    ವಿಜಯನಗರ ಸಾಮ್ರಾಜ್ಯವನ್ನು ಸದಾಶಿವ ಮಹಾರಾಯನು ಆಳುತ್ತಿದ್ದಾಗ ಆತನ ಮಂಡಳೇಶ್ವರನಾಗಿ ಅಳಿಯ ರಾಮ ರಾಜನಿದ್ದನು. ಈತನ ಮಗ ಕೃಷ್ಣಪ್ಪರಾಜನ ಕೈಕೆಳಗೆ ವೆಂಗಳಪ್ಪ ನಾಯಕ ಮುದುಗಲ್ ದುರ್ಗಾಧಿಪತಿಯಾಗಿದ್ದನು. ಈ ವೆಂಗಳಪ್ಪ ನಾಯಕನು ಸಿಂಧನೂರಿಂದ ಜಾಲಿಹಾಳ ಅಗ್ರಹಾರಕ್ಕೆ ಹೋಗುವ ಮಾರ್ಗದಲ್ಲಿ ನೀರುತೀರ್ಥ, ಎಡೆಯ ಹೊಲದ ಉತ್ತರಕ್ಕೆ ತೋಡುಬಾವಿ, ಅರವಟ್ಟಿಗೆ ನಿರ್ಮಿಸಿದ್ದನು. ಬ್ರಾಹ್ಮಣ ತಿಪ್ಪಣ್ಣನಿಗೆ ಧರ್ಮ ಮಾನ್ಯವಾಗಿ ಭೂದಾನ ನೀಡಿದ್ದನು. ಹಾಗೆಯೇ ಸಲಿರೆಡ್ಡಿ ಯತಿಗೆ ಬಿಟ್ಟ ತುಂಡು ಭೂಮಿ, ಸಿಂಧನೂರು ಕರಿಯಬೆಂಚಿ ಹೊಲದ ಸ್ಥಳದಲ್ಲಿ ಧಾರಾಪೂರ್ವಕವಾಗಿ ಕೊಟ್ಟಿದ್ದನು. ವಕ್ಕುಳದ ಹೊಲ, ಬುಕ್ಕಿರೆಡ್ಡಿಯವರ ಹೊಲ, ವಡೆಯ ಹಳ್ಳ, ನಾಗಮಯ ಮಾಡುವ ಹೊಲ ಮೊದಲಾದ ಚತುರ್‌ಸೀಮೆಗಳಲ್ಲಿ ಜಮೀನನ್ನು ವೆಂಗಳಪ್ಪ ನಾಯಕ ದಾನ ಬಿಟ್ಟಿದ್ದನು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಶಾಸನದಲ್ಲಿನ ಸೂಚನೆಗಳನ್ನು ಮಾನ್ಯ ಮಾಡದ ವಿವಿಧ ಜನಕ್ಕೆ ಲಭಿಸುವ ವಿವಿಧ ಶಾಪಗಳನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ. ಇಂಥ ಐತಿಹಾಸಿಕ ಮಾಹಿತಿ ಹೊಂದಿರುವ ಈ ಶಾಸನವು ಅಡವಿಯಲ್ಲಿ ಅನಾಥವಾಗಿ ಬಿದ್ದಿದ್ದು, ಸ್ಥಳೀಯರು, ಪ್ರಾಚ್ಯವಸ್ತು ಇಲಾಖೆಯವರು ರಕ್ಷಣೆ ಮಾಡಬೇಕಿದೆ.

    ಈ ಶಾಸನದ ಬಗ್ಗೆ ಕ್ರಿ.ಶ. 2002 ರಿಂದ ಹಲವು ವ್ಯಕ್ತಿಗಳು ಮತ್ತು ಸಾರಾಂಶ ಪ್ರಕಟ ಮಾಡಿದವರಿಗೆ ಕೇಳಿದರೆ ಇದರ ಮಾಹಿತಿ ಹೇಳಲಿಲ್ಲ. ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ಖಾದರ್‌ಬಾಷಾಗೆ ತಿಳಿಸಿದಾಗ ತಮ್ಮ ವಿದ್ಯಾರ್ಥಿಗಳಿಂದ ನವಲಹಳ್ಳಿಯವರ ಕಡೆಯಿಂದ ಈ ಶಾಸನವನ್ನು ಪತ್ತೆ ಮಾಡಿಸಿ, ನಮಗೆ ಮಾಹಿತಿ ನೀಡಿದರು. ಆ ಸ್ಥಳಕ್ಕೆ ಹೋಗಿ ಅದರ ಪಡಿಯಚ್ಚು ತೆಗೆದುಕೊಂಡು ಬಂದು ಅಧ್ಯಯನ ಮಾಡಿ, ಅದರ ಮಾಹಿತಿ ಒದಗಿಸಿರುವೆ.
    | ಡಾ.ಚನ್ನಬಸಪ್ಪ ವಲ್ಕಂದಿನ್ನಿ ಸಂಶೋಧಕ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts