More

    ತುಂಗಭದ್ರಾ ನೀರಿನ ಹರಿವು ಇಳಿಕೆ, ರೈತರು ನಿರಾಳ

    ಸಿಂಧನೂರು: ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನದಿ ದಂಡೆಯ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ನಿಧಾನವಾಗಿ ಆರಂಭಗೊಂಡಿವೆ.

    ಈ ಬಾರಿ ಅವಧಿಗೆ ಮುಂಚೆಯೇ ಜಲಾಶಯ ಭರ್ತಿಗೊಂಡ ಹಿನ್ನೆಲೆಯಲ್ಲಿ ನದಿಗೆ 1.20 ಲಕ್ಷ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿದೆ. 2.50 ಲಕ್ಷ ಕ್ಯೂಸೆಕ್ ಮೀರಿದರೆ ಮಾತ್ರ ತಾಲೂಕು ವ್ಯಾಪ್ತಿಯ ನದಿ ದಂಡೆ ರೈತರಿಗೆ ಸಂಕಷ್ಟ ಎದುರಿಸಬೇಕಿತ್ತು. ಈಗ ನೀರಿನ ಹರಿವು ಕಡಿಮೆಯಾಗಿರುವುದು ನಿರಾಳ ಉಂಟು ಮಾಡಿದೆ.

    ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ನಾಲೆ ನೀರನ್ನು ನಂಬಿ ಕೃಷಿ ಮಾಡುವ ಜತೆಗೆ ಶೇ.30 ರೈತರು ತುಂಗಭದ್ರಾ ನದಿ ನೀರನ್ನು ಅವಲಂಬಿಸಿದ್ದಾರೆ. ಪ್ರತಿ ಮುಂಗಾರು ಸಂದರ್ಭದಲ್ಲಿ ತುಂಗಭದ್ರಾ ಜಲಾಶಯ ಭರ್ತಿಗೊಳ್ಳುತ್ತಿದ್ದಂತೆ ನದಿ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಆತಂಕ ಶುರುವಾಗುತ್ತದೆ. ಕಳೆದ ಬಾರಿಯೂ ನೂರಾರು ಎಕರೆ ಜಮೀನಿಗೆ ನದಿ ನೀರು ಹೊಕ್ಕಿತ್ತು. ಕೆಲ ಗ್ರಾಮಗಳಿಗೂ ನೀರು ನುಗ್ಗಿ ನಷ್ಟ ಉಂಟು ಮಾಡಿತ್ತು.

    ಈ ಬಾರಿ 1.50 ಲಕ್ಷ ಕ್ಯೂಸೆಕ್ ಒಳಗೆ ನೀರು ನದಿಗೆ ಬಿಟ್ಟಿದ್ದರಿಂದ ಯಾವುದೇ ನಷ್ಟ ಸಂಭವಿಸಿಲ್ಲ. ನದಿಯಲ್ಲಿ ಪಂಪ್‌ಸೆಟ್ ಹಾಕಿಕೊಂಡ ರೈತರಿಗೆ ತೊಂದರೆಯಾಗಿದೆ. ಕೆಲ ರೈತರು ನೀರು ಹರಿಸುವ ಮುನ್ನ ಪಂಪ್‌ಸೆಟ್‌ಗಳನ್ನು ಬಿಚ್ಚಿಕೊಂಡು ಬಂದಿದ್ದಾರೆ. ಸದ್ಯ ಭತ್ತ ನಾಟಿಗೂ ಸಕಾಲವಾಗಿರುವುದರಿಂದ ತುಂಗಭದ್ರಾ ನದಿ ವ್ಯಾಪ್ತಿಯ ರೈತರು ಭತ್ತ ನಾಟಿಗೆ ಮುಂದಾಗಿದ್ದಾರೆ.

    ಸಿಂಧನೂರು ತಾಲೂಕು ವ್ಯಾಪ್ತಿಯ ತುಂಗಭದ್ರಾ ನದಿಗೆ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ 1.20 ಲಕ್ಷ ಕ್ಯೂಸೆಕ್ಸ್ ನೀರು ಹರಿ ಬಿಡಲಾಗಿತ್ತು. ಆದರೆ ಯಾವುದೇ ಬೆಳೆ, ಆಸ್ತಿ ಹಾನಿಯಾಗಿಲ್ಲ. 2 ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಮಾತ್ರ ನಷ್ಟ ಎದುರಾಗಲಿದೆ.
    | ಮಂಜುನಾಥ ಭೋಗಾವತಿ ತಹಸೀಲ್ದಾರ್ ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts