More

    ಮಾನವೀಯ ದೃಷ್ಟಿಯೇ ಸದ್ಭಾವನೆ ಎಂದ ಖ್ಯಾತ ಪ್ರವಚನಕಾರ, ಕನ್ನಡದ ಕಬೀರ ಇಬ್ರಾಹಿಂ ಸುತಾರ

    ಸಿಂಧನೂರು: ಮಾನವೀಯ ದೃಷ್ಟಿಯೇ ಸದ್ಭಾವನೆಯಾಗಿದ್ದು ಎಲ್ಲ ಜಾತಿ, ಧರ್ಮದವರು ಭಾವನಾಪೂರ್ಣವಾಗಿ ಪರಸ್ಪರ ಅಪ್ಪಿಕೊಂಡು, ಒಪ್ಪಿಕೊಂಡು ಪ್ರೀತಿ, ಸೌಹಾರ್ದತೆಯಿಂದ ಬಾಳುವುದೇ ಇದರ ತಿರುಳಾಗಿದೆಂದು ಮಹಾಲಿಂಗಪುರದ ಖ್ಯಾತ ಪ್ರವಚನಕಾರ, ಕನ್ನಡದ ಕಬೀರ ಇಬ್ರಾಹಿಂ ಸುತಾರ ಹೇಳಿದರು.

    ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ಸದ್ಭಾವನಾ ವೇದಿಕೆ ಬುಧವಾರ ಉದ್ಘಾಟಿಸಿ ಮಾತನಾಡಿದರು. ಹಲವು ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಆಚಾರ-ವಿಚಾರಗಳನ್ನು ಒಳಗೊಳ್ಳುವ ಮೂಲಕ ವಿವಿಧರೆತಲ್ಲಿ ಏಕತೆ ಹೊಂದಿರುವುದೇ ಭಾರತ ದೇಶದ ಹೆಗ್ಗಳಿಕೆಯಾಗಿದೆ. ಮನುಷ್ಯರನ್ನು ಒಗ್ಗೂಡಿಸಿದರೆ ದೊಡ್ಡವರಾಗುತ್ತಾರೆ. ಬೇರ್ಪಡಿಸಿದರೆ ಸಣ್ಣವರಾಗುತ್ತಾರೆ. ಹೀಗಾಗಿ ಸಣ್ಣತನದ ಮನಸ್ಥಿತಿಯುಳ್ಳ ಕೋಮುವಾದಿಗಳು ಸಮಾಜಕ್ಕೆ ಅಪಾಯಕಾರಿ ಎಂದರು.

    ಈಗ ಉದಯಿಸಿರುವ ಸದ್ಭಾವನಾ ವೇದಿಕೆಯು ತಾಲೂಕಿಗೆ ಮಾತ್ರ ಸೀಮಿತವಾಗದೆ, ನಾಡಿನಾದ್ಯಂತ ಪಸರಿಸಲಿ. ಶಾಂತಿ, ಸಾಮರಸ್ಯ, ಪ್ರಜಾಪ್ರಭುತ್ವ ಕಾಪಾಡುವ ನಿಟ್ಟಿನಲ್ಲಿ ಸಾಗಲಿ. ಸರ್ವ ಜನಾಂಗದ ಒಳಿತನ್ನೇ ಬಯಸಬೇಕೆಂದು ತಿಳಿಸಿದರು.

    ಮಂಗಳೂರಿನ ಶಾಂತಿ ಪ್ರಕಾಶನ ಮಹ್ಮದ್ ಕುಂಞ ಮಾತನಾಡಿ, ಪ್ರತಿಯೊಬ್ಬರೂ ದೇವರ ಭಯದಿಂದ ಜೀವಿಸಿದರೆ ನೆಮ್ಮದಿಯ ಜೀವನ ಸಾಗುತ್ತದೆ. ದೇಶಪ್ರೇಮ, ಶಕ್ತಿ ಮತ್ತು ಅಭಿಮಾನಿ ಸ್ವಯಂ ಪ್ರೇರಿತವಾಗಿ ಇರಬೇಕೆ ಹೊರೆತು ಬೇರೆಯವರು ಹೇಳಿಕೊಡುವದಲ್ಲ. ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಮೂಲಕ ಒಳ್ಳೆತನದ ಕಡೆ ಹೆಜ್ಜೆ ಇಡಬೇಕೆಂದರು.

    ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿ.ಎಚ್.ಕಂಬಳಿ ಪ್ರಾಸ್ತಾವಿಕ ಮಾತನಾಡಿದರು. ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಮರಿಸ್ವಾಮಿ, ಅವಧೂತ ರಾಜಯೋಗಿ ನಾಮದೇವಗೌಡ, ತುರ್ವಿಹಾಳ ಚಿದಾನಂದಯ್ಯ ಗುರುವಿನ್ ನೇತೃತ್ವ ವಹಿಸಿದ್ದರು. ಸದ್ಭಾವನಾ ವೇದಿಕೆ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಸಾಲಿಮಠ ನಾಡಗೀತೆ ಹಾಡಿದರು. ಅಮರೇಶಪ್ಪ ಮೈಲಾರ ಸ್ವಾಗತಿಸಿದರು. ಬೀರಪ್ಪ ಶಂಭೋಜಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts