More

    ನವಭಾರತ ನಿರ್ಮಾಣಕ್ಕೆ ಸಹಕಾರ ಅಗತ್ಯ

    ರಾಮದುರ್ಗ/ಬೆಳಗಾವಿ: ರಾಜ್ಯದಲ್ಲಿ ಸರ್ಕಾರ ಹಿಂದೆಂದಿಗಿಂತಲೂ ತ್ವರಿತವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ನವಭಾರತ ಹಾಗೂ ನವರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ.ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ 671.28 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸ್ಥಳೀಯ ಶಾಸಕ ಮಹಾದೇವಪ್ಪ ಯಾದವಾಡ ಅವರ ಒತ್ತಾಸೆ ಫಲವಾಗಿ ರಾಮದುರ್ಗ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹರಿದು ಬಂದಿದೆ. ಮಲಪ್ರಭಾ ನದಿ ಪ್ರವಾಹದಿಂದ ಬಾಧಿತಗೊಳ್ಳುತ್ತಿದ್ದ ಗ್ರಾಮಗಳ ರಕ್ಷಣೆಗೆ 126 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ರಾಮದುರ್ಗ ತಾಲೂಕಿನ 19 ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಈ ತಿಂಗಳಿನಲ್ಲಿ ಡಿಪಿಆರ್ ತಯಾರಿಸಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು, ರಾಮದುರ್ಗ ತಾಲೂಕಿನ ಜನರಿಗೆ ಕುಡಿಯುವ ಒದಗಿಸುವ 439 ಕೋಟಿ ರೂಪಾಯಿ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಕುಡಿಯುವ ನೀರು, ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯುತ್ ವಿತರಣೆ ವ್ಯವಸ್ಥೆ ಬಲಪಡಿಸುವುದು ಸೇರಿ ತಾಲೂಕಿನ ಹತ್ತಾರು ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ. ಚಂದರಗಿ ಭಾಗದ 19 ಕೆರೆ ತುಂಬಿಸುವ ಯೋಜನೆಯನ್ನು ಘೋಷಿಸುವ ಮೂಲಕ ಬರ ತಾಲೂಕು ಎಂಬ ಹಣೆಪಟ್ಟಿ ಅಳಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

    ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಪ್ರೊ. ಸಿದ್ದಣ್ಣ ಲಂಗೋಟಿ ಅವರು ಬಸವೇಶ್ವರರ ಕುರಿತು ರಚಿಸಿದ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಶಾಸಕರಾದ ಮಹಾಂತೇಶ ದೊಡಗೌಡರ, ದುರ್ಯೋಧನ ಐಹೊಳೆ ಮಾತನಾಡಿದರು. ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಭೈರತಿ ಬಸವರಾಜ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಹಣಮಂತ ನಿರಾಣಿ, ಶಾಸಕರಾದ ಅನಿಲ ಬೆನಕೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಬಿಜೆಪಿ ಮಹಿಳಾ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಮುಖಂಡರಾದ ಡಾ.ಕೆ.ವಿ.ಪಾಟೀಲ, ಪಿ.ಎಫ್. ಪಾಟೀಲ, ರೇಣಪ್ಪ ಸೋಮಗೊಂಡ, ಮಲ್ಲಿಕಾರ್ಜುನ ಕೊಪ್ಪದ, ಮಾರುತಿ ಕೊಪ್ಪದ, ಮಾರುತಿ ತುಪ್ಪದ, ಎಸ್.ಎಸ್.ಢವಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    ಜನೋಪಯೋಗಿ ಮಹಾದೇವಪ್ಪಣ್ಣ, ಬೆಲ್ಲದಂತ ಗೋವಿಂದ ಕಾರಜೋಳ!

    ವೇದಿಕೆ ಕಾರ್ಯಕ್ರಮದಲ್ಲಿ ಜನೋಪಯೋಗಿ ಶಾಸಕ ಮಹಾದೇವಪ್ಪಣ್ಣ ಎನ್ನುತ್ತ ಮಾತು ಆರಂಭಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಬಹಳಷ್ಟು ಶಾಸಕರು ಜನಪ್ರಿಯ ಶಾಸಕರಿರುತ್ತಾರೆ. ಹೆಸರಿಗಷ್ಟೇ, ತಳಮಟ್ಟಕ್ಕೆ ಯಾರೂ ಹೋಗಿರಲ್ಲ. ಜನರ ಸಂಕಷ್ಟಗಳನ್ನು ಅರಿತು ಅವುಗಳನ್ನು ಪರಿಹರಿಸಿ, ಜನತೆಯ ಜೀವನಮಟ್ಟ ಸುಧಾರಿಸುವ ಜನೋಪಯೋಗಿ ಶಾಸಕರಲ್ಲಿ ಮಹಾದೇವಪ್ಪಣ್ಣ ಅವರು ಮುಂದಿದ್ದಾರೆ ಎಂದು ಕೊಂಡಾಡಿದರು. ನೀರಾವರಿ ಸಚಿವನಾಗಿ, ಕಳಸಾ ಬಂಡೂರಿ ಹೋರಾಟದ ಸಂದರ್ಭದಲ್ಲಿ ಇಲ್ಲಿನ ಎಲ್ಲ ಅವಶ್ಯಕತೆ ಮನಗಂಡಿದ್ದೇನೆ. ಟೋಪಿ ಹಾಕ್ಕೊಂಡ ತಕ್ಷಣ ಸಜ್ಜನರು ಎನ್ನುತ್ತೇವೆ. ಆದರೆ, ಮಹಾದೇವಪ್ಪಣ್ಣ ಬೆರಕಿ ಅದಾನ. ಒಂದು ಮುಗಿಯುವುದೇ ತಡ, ಮತ್ತೊಂದನ್ನು ಮುಂದಿಡುತ್ತಾನೆ. ಅವರಂತೆಯೇ ಬೆಲ್ಲ ತಯಾರಿಸುವ ಮಹಾಲಿಂಗಪುರ ಕ್ಷೇತ್ರ ಒಳಗೊಂಡಿರುವ ಸಚಿವ ಗೋವಿಂದ ಕಾರಜೋಳ ಅವರು ಬೆಲ್ಲದಂತೆಯೇ ಯಾವ ಕಡೆಗೆ ಮುರಿದು ತಿಂದರು ಸಿಹಿಯೇ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

    ರಾಮದುರ್ಗ ಅಭ್ಯುದಯಕ್ಕೆ ಕೊಡುಗೆ

    ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ ಮಾತನಾಡಿ, ಮೊದಲ ಬಾರಿ ಶಾಸಕರಾದ ಸಂದರ್ಭದಲ್ಲಿ ಮಹಾದೇವಪ್ಪ ಯಾದವಾಡ ಅವರು ಎರಡು ವರ್ಷ ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಜನತೆಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಬಳಿಕ ಕರೊನಾ ಹಾಗೂ ನೆರೆ ಎದುರಾಯಿತು. ಆ ಸಂದರ್ಭದಲ್ಲಿಯೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಕುಡಿಯುವ ನೀರು, ಸಮರ್ಪಕ ರಸ್ತೆ, ವಿದ್ಯುತ್ ಸಂಪರ್ಕ ಸೇರಿ ಎಲ್ಲ ವಲಯದಲ್ಲೂ ಸಾರ್ವಜನಿಕರಿಗೆ ಸೌಕರ್ಯ ಒದಗಿಸುವುದಕ್ಕಾಗಿ ಒಟ್ಟು ಎರಡು ಸಾವಿರಕ್ಕೂ ಅಧಿಕ ಕೋಟಿ ರೂ. ಅನುದಾನ ತಂದು, ಕ್ಷೇತ್ರದ ಅಭ್ಯುದಯಕ್ಕೆ ನಾಂದಿ ಹಾಡಿದ್ದಾರೆ ಎಂದರು. ಅಭಿವೃದ್ಧಿ ಪರ್ವವನ್ನೇ ಆರಂಭಿಸಿರುವ ಅನೇಕ ಕಾಮಗಾರಿಗಳನ್ನು ಮುಂದುವರಿಸಲು ಸಂಕಲ್ಪ ಮಾಡಿರುವ ಮಹಾದೇವಪ್ಪ ಅವರನ್ನು ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

    ಯಾವುದೇ ಟೀಕೆ-ಟಿಪ್ಪಣಿಗೆ ಸೊಪ್ಪು ಹಾಕದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ.
    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts