More

    ಏ.15 ರವರೆಗೆ ನೀರು ಹರಿಸಿ – ಸರ್ಕಾರಕ್ಕೆ ಮಾಜಿ ಶಾಸಕ ಬಾದರ್ಲಿ ಒತ್ತಾಯ

    ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಏ.15 ರವರೆಗೆ ಸಮರ್ಪಕವಾಗಿ ನೀರು ಹರಿಸುವ ಮೂಲಕ ರೈತರ ಬೆಳೆ ರಕ್ಷಣೆ ಮಾಡಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಮಾ.31 ರವರೆಗೆ ನೀರು ಬಿಡುವುದಾಗಿ ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಶಾಸಕ ವೆಂಕಟರಾವ ನಾಡಗೌಡರು ತಿಳಿಸಿದ್ದಾರೆ. ಆದರೆ ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ. ಕಾರಣ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು, ಸಂಸದರು, ಶಾಸಕರು ಏ.15 ರವರೆಗೆ ನೀರನ್ನು ಎಡದಂಡೆ ನಾಲೆಗೆ ಹರಿಸಬೇಕು. ಈ ಬಗ್ಗೆ ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ರೈತರ ಜೊತೆಗೂಡಿ ಕಾಂಗ್ರೆಸ್ ಉಗ್ರ ಹೋರಾಟ ನಡೆಸುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಆಂಧ್ರದೊಂದಿಗೆ ಪತ್ರ ವ್ಯವಹಾರ ನಡೆಸಿ ನೀರು ಪಡೆದುಕೊಳ್ಳಲಾಗಿತ್ತು. ಭದ್ರಾದಿಂದಲೂ ನೀರು ಪಡೆದು ಎಡದಂಡೆಗೆ ಹರಿಸುವ ಮೂಲಕ ರೈತರ ಬೆಳೆ ರಕ್ಷಣೆ ಮಾಡಲಾಗಿತ್ತು. ಆದರೆ, ಈಗಿನ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಸ್ಥಳೀಯ ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇವರಿಗೆ ರೈತರ ಶಾಪ ತಟ್ಟುತ್ತದೆ. ಮುಂದಿನ ದಿನಗಳಲ್ಲಿ ರೈತರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

    ಕೆ.ವಿರೂಪಾಕ್ಷಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಅವರ ವೈಯಕ್ತಿಕ ವಿಚಾರ. ಅವರು ಹೋಗಿರುವುದರಿಂದ ಪಕ್ಷಕ್ಕೆ ಯಾವ ನಷ್ಟನೂ ಆಗಲ್ಲ. ಬದಲಿಗೆ ಲಾಭ ಆಗುತ್ತದೆ. ಜನ ಜಾಗೃತರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ. ಪಕ್ಷಾಂತರಿ ಪ್ರತಾಪಗೌಡ ಪಾಟೀಲ್‌ರಿಗೆ ಈ ಉಪಚುನಾವಣೆಯಲ್ಲಿ ಬುದ್ಧಿ ಕಲಿಸಿ, ಆರ್.ಬಸನಗೌಡರಿಗೆ ಆಶೀರ್ವಾದ ಮಾಡುತ್ತಾರೆ ಎಂದರು.

    ಮಸ್ಕಿ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್ ವಕೀಲ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಗೀರದಾರ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮುಖಂಡ ಎಂ.ಲಿಂಗಪ್ಪ ದಢೇಸುಗೂರು, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಸಣ್ಣ ಭೀಮನಗೌಡ, ಜಿಪಂ ಸದಸ್ಯ ಬಸವರಾಜ ಹಿರೇಗೌಡ, ಲಿಂಗರಾಜ ಪಾಟೀಲ್ ಹಂಚಿನಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts