More

    ಕೃಷ್ಣ ಮಠದಲ್ಲಿ ಸರಳ ಕೃಷ್ಣಾಷ್ಟಮಿ

    ಉಡುಪಿ: ಕೃಷ್ಣ ಮಠದಲ್ಲಿ ಸೆ.10, 11ರಂದು ಸರಳವಾಗಿ ಶ್ರೀ ಕೃಷ್ಣಾಷ್ಟಮಿ ಆಚರಿಸಲಾಗುವುದು. ವಿಶೇಷ ಪೂಜೆ ಯಥಾಪ್ರಕಾರ ನಡೆಯಲಿದೆ  ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

    ‘ವಿಜಯವಾಣಿ’ ಜತೆ ಮಾತನಾಡಿದ ಶ್ರೀಗಳು, ಈ ಬಾರಿ ಆರು ಸ್ವಾಮೀಜಿಯವರು ಉಡುಪಿಯಲ್ಲೇ ಚಾತುರ್ಮಾಸ್ಯ ವ್ರತ ದೀಕ್ಷೆ ಸ್ವೀಕರಿಸಿದ್ದಾರೆ. ಹೀಗಾಗಿ ಯತಿಗಳು ಮತ್ತು ಸಿಬ್ಬಂದಿಗೆ ಮಾತ್ರ ಅರ್ಘ್ಯ ಪ್ರದಾನಕ್ಕೆ ಅವಕಾಶ ನೀಡಲಾಗಿದೆ. ಸೇವೆ ನೀಡಿದವರಿಗೆ ದೇವರ ದರ್ಶನ ಮಾಡಬೇಕೆಂಬ ಹಂಬಲ ಸಹಜ. ಆದರೆ ಇದರಿಂದ ಜನಜಂಗುಳಿ ಕಾರಣಕ್ಕೆ ಸಮಸ್ಯೆಯಾಗಬಹುದು. ಬೇರೆ ದೇವಸ್ಥಾನ ಮತ್ತು ಇಲ್ಲಿನ ಪೂಜೆ ಪದ್ಧತಿಗೆ ವ್ಯತ್ಯಾಸವಿದೆ. ಬೇರೆ ಕಡೆ ಅರ್ಚಕರಿಗೆ ಅಸೌಖ್ಯವಾದರೆ ಇನ್ನೊಬ್ಬರು ಪೂಜೆ ಮಾಡಬಹುದು. ಆದರೆ ಇಲ್ಲಿ ಹಾಗೆ ಸಾಧ್ಯವಿಲ್ಲ. ಹೀಗಾಗಿ ಕೃಷ್ಣ ಮಠಕ್ಕೆ ಭಕ್ತರಿಗೆ ಪ್ರವೇಶ ನೀಡುವ ಯೋಚನೆ ಸದ್ಯಕ್ಕಿಲ್ಲ ಎಂದರು.
    ದೇವರ ಪೂಜೆಯನ್ನು ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡುವ ಕಾರಣ, ಭಕ್ತರು ಮನೆಯಲ್ಲೇ ಭಕ್ತಿ ಮತ್ತು ಶ್ರದ್ಧೆಯಿಂದ ತುಳಸಿ ಅರ್ಪಣೆ ಮಾಡಬಹುದು. ಅದು ಕೃಷ್ಣನಿಗೆ ಸಲ್ಲುತ್ತದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

    ವಿಟ್ಲ ಪಿಂಡಿ ಬಗ್ಗೆ ಡಿಸಿ ಜತೆ ಚರ್ಚೆ: ವಿಟ್ಲ ಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಉತ್ಸವ ಸಂಪ್ರದಾಯಬದ್ಧವಾಗಿ, ಸರಳವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಜನ ಸಹಜವಾಗಿ ಬರುತ್ತಾರೆ. ಅವರ ಭಾವನೆಗೂ ಧಕ್ಕೆ ಬರಬಾರದು. ಹೀಗಾಗಿ ಜಿಲ್ಲಾಧಿಕಾರಿ ಬಳಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ರಥೋತ್ಸವಕ್ಕೆ ಚಿಕ್ಕ ರಥಗಳನ್ನು ಬಳಸಲಾಗುತ್ತದೆ. ಇದನ್ನು ಎಳೆಯಲು ಹೆಚ್ಚು ಜನರ ಅಗತ್ಯವಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಲೂ ಇದು ಸಹಕಾರಿ. ಈ ಬಾರಿ ಉಂಡೆ-ಚಕ್ಕುಲಿ ಪ್ರಸಾದ ಹಂಚಿಕೆ ಇಲ್ಲ. ನೈವೇದ್ಯಕ್ಕೆ ಆಗುವಷ್ಟು ಮಾತ್ರ ಮಾಡುತ್ತೇವೆ ಎಂದು ಪರ್ಯಾಯ ಶ್ರೀಗಳು ಹೇಳಿದರು.

    ಚಿಕ್ಕ ಮಕ್ಕಳಲ್ಲಿ ಕೋವಿಡ್-19 ಸೋಂಕಿನ ಅಪಾಯ ಹೆಚ್ಚು. ಹೀಗಾಗಿ ಕೃಷ್ಣ ವೇಷ ಸ್ಪರ್ಧೆ ರದ್ದು ಮಾಡಲಾಗಿದೆ. ಕೃಷ್ಣ ಸನ್ನಿಧಿಗೆ ಮಕ್ಕಳನ್ನು ಕರೆದುಕೊಂಡು ಬಂದರೆ ಭಕ್ತಿ ಬೆಳೆಯುತ್ತದೆ ಎಂಬುದು ಸ್ಪರ್ಧೆಯ ಮುಖ್ಯ ಉದ್ದೇಶ. ಇದನ್ನು ಕರೊನಾ ಹಾವಳಿ ಕಡಿಮೆಯಾದ ಬಳಿಕವೂ ಮಾಡಬಹುದು.
    |ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಅದಮಾರು ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts