More

    ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

    ಬೆಳಿಗ್ಗೆಯಿಂದ ಸಂಜೆ ತನಕ ಕಂಪ್ಯೂಟರ್​ ಮುಂದೆ ಒಂದೇ ಸಮ ಕೂತು ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳು ಕಂಡುಬರುತ್ತವೆ. ನಿರಂತರವಾಗಿ ಒಂದೇ ಕಡೆ ಕೂತು ದೃಷ್ಟಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುವುದರಿಂದ ಕಣ್ಣಿಗೆ ಆಯಾಸ, ಬೆನ್ನು-ಭುಜಗಳ ಸೆಳೆತ, ಸೊಂಟ ನೋವು ಮತ್ತು ಬೆನ್ನು ನೋವು ಉಂಟಾಗಬಹುದು. ಅಂತಹವರಿಗೆ ಉಪಯುಕ್ತವಾದ ಕೆಲವು ಆಸನಗಳುಂಟು. ಆರೋಗ್ಯ ಹೆಚ್ಚಿಸಲೂ ಇವು ಸಹಕಾರಿ.

    ಬೆಳಗ್ಗೆ ಅಥವಾ ಸಂಜೆ ಒಂದು ಹೊತ್ತು ಅಥವಾ ಸಾಧ್ಯವಾದರೆ ಎರಡೂ ಹೊತ್ತು ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು. ಚೆನ್ನಾಗಿ ಗಾಳಿ, ಬೆಳಕು ಇರುವಂಥ ಜಾಗದಲ್ಲಿ ಕುಳಿತು ಮಾಡಿದರೆ ಒಳ್ಳೆಯದು. ಕಛೇರಿಯಲ್ಲೇ ಕುರ್ಚಿಯ ಮೇಲೆ ಕುಳಿತು ಕೂಡ ಈ ಸರಳ ಆಸನಗಳನ್ನು ಮಾಡಬಹುದು.

    ಆರಂಭದಲ್ಲಿ ಕುರ್ಚಿಯ ಮೇಲೇ ಕೂತು ಚಿನ್ಮುದ್ರೆ ಧರಿಸಿ, ಬೆನ್ನು ಮತ್ತು ಕುತ್ತಿಗೆ ನೇರ ಮಾಡಿ. ಕಣ್ಣು ಮುಚ್ಚಿ ಉಸಿರಿನ ಗತಿಯ ಮೇಲೆ ಗಮನ ಕೇಂದ್ರೀಕರಿಸಿ. ಹಾಯಾಗಿ, ಶರೀರದ ಆಂತರಿಕ ವಿಷಯಗಳಾದ ಶ್ವಾಸೋಚ್ಛ್ವಾಸವನ್ನೇ ಗಮನಿಸಬೇಕು. ಹೀಗೆ ಉಸಿರಿನ ಕಡೆ ಗಮನ ಹರಿಸಿದಾಗ ಮನಸ್ಸು ನಿರಾಳವಾಗುತ್ತದೆ, ನಿರುಮ್ಮಳವಾಗುತ್ತದೆ. ನಿಶ್ಚಿಂತೆ ಮತ್ತು ಶಾಂತಿ ಲಭಿಸುತ್ತದೆ.

    ಇದನ್ನೂ ಓದಿ: ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಪ್ರಾಣಾಯಾಮ

    ಸುಖಪ್ರಾಣಾಯಾಮ: ಪ್ರಾಣಕ್ಕೆ ಹೊಸ ಆಯಾಮ ಕೊಡುವುದೇ ಪ್ರಾಣಾಯಾಮ. ಮನಸ್ಸಿನ ಚಂಚಲತೆಯನ್ನು ನಿವಾರಿಸುವ ಕ್ರಮಬದ್ಧ ವಿಧಾನವಿದು. ನಿಶ್ಚಿಂತೆಯಿಂದ ಕುಳಿತುಕೊಂಡು ನಿಶ್ಶಬ್ದವಾಗಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಬೇಕು. ಹಾಗೇ ದೀರ್ಘವಾಗಿ ಉಸಿರನ್ನು ಹೊರಕ್ಕೆ ಬಿಡಬೇಕು. ಇದನ್ನು ಕ್ರಮವಾಗಿ ಪೂರಕ ಮತ್ತು ರೇಚಕ ಎಂದು ಕರೆಯುತ್ತಾರೆ. ಈ ರೀತಿಯಾಗಿ 3 ಬಾರಿ ಅಥವಾ 6 ಬಾರಿ ಮಾಡಬೇಕು. ಇದರಿಂದಾಗಿ ಮನಸ್ಸಿನ ಚಂಚಲತೆ ಮತ್ತು ಒತ್ತಡ ನಿವಾರಣೆಯಾಗುತ್ತದೆ.

    ಪರ್ವತಾಸನ ಭಂಗಿ: ಕಚೇರಿಯಲ್ಲಿ ಕುರ್ಚಿಯಲ್ಲೇ ಕುಳಿತು ಮಾಡಬಹುದಾದ ಮತ್ತೊಂದು ಆಸನವಿದೆ. ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಹೆಣೆದು, ತಿರುಗಿಸುವುದು. ನಿಧಾನವಾಗಿ ತೋಳುಗಳನ್ನು ತಲೆಯ ಮೇಲಕ್ಕೆ ನೇರವಾಗಿ ಎತ್ತುವುದು. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಿ, ನಂತರ ನಿಧಾನವಾಗಿ ಉಸಿರನ್ನು ಬಿಡುತ್ತಾ ಕೈಗಳನ್ನು ಕೆಳಗಿಳಿಸುವುದು. ಒಮ್ಮೆ ಅಭ್ಯಾಸವಾದರೆ 3 ಅಥವಾ 6 ಬಾರಿ ಮಾಡಬಹುದು. ಇದರಿಂದ ತೋಳುಗಳು ಬಲಗೊಂಡು, ಕುತ್ತಿಗೆಗೆ ಸಂಬಂಧಿಸಿದ ನೋವುಗಳು, ಭುಜಗಳ ಸೆಳೆತ ನಿವಾರಣೆಯಾಗುತ್ತವೆ. ಒತ್ತಡ ನಿವಾರಣೆಯಾಗುತ್ತದೆ.

    ಕುತ್ತಿಗೆಗೆ ವ್ಯಾಯಾಮ: ಕುತ್ತಿಗೆಯನ್ನು ನಿಧಾನವಾಗಿ ಕೆಳಗಿಳಿಸಿ ಎದೆಗೆ ಒತ್ತುವುದು. ಇದನ್ನು ಚಿನ್​ ಟು ದ ಕಾಲರ್ ಬೋನ್​ ಪೊಸಿಷನ್ ಎನ್ನುತ್ತಾರೆ. 1) ಉಸಿರನ್ನು ತೆಗೆದುಕೊಳ್ಳುತ್ತಾ ತಲೆ ಎತ್ತಿ ಹಿಂದಕ್ಕೆ ಚಾಚುವುದು. ಮತ್ತೆ ಉಸಿರನ್ನು ಬಿಡುತ್ತಾ ಸಹಜಸ್ಥಿತಿಗೆ ಮರಳುವುದು. 2) ನಂತರ ಕುತ್ತಿಗೆಯನ್ನು ಎಡಕ್ಕೂ ಬಲಕ್ಕೂ ಪೂರಕ ಮತ್ತು ರೇಚಕಗಳೊಂದಿಗೆ ನಿಧಾನವಾಗಿ ಬಾಗಿಸುವ ಅಭ್ಯಾಸ ಮಾಡುವುದು. 3) ನಂತರ ಕುತ್ತಿಗೆಯನ್ನು ದೀರ್ಘವಾದ ಉಸಿರಿನೊಂದಿಗೆ ಬಲಬದಿಗೆ ತಿರುಗಿಸಬೇಕು – ಈ ಸ್ಥಿತಿಯಲ್ಲಿ ದೃಷ್ಟಿಯನ್ನು ದೂರಕ್ಕೆ ನೆಟ್ಟಿರಬೇಕು. ಅದೇ ರೀತಿ ಎಡಬದಿಗೆ ತಿರುಗಿಸಬೇಕು. 4) ನಿಧಾನವಾಗಿ ಕುತ್ತಿಗೆಯನ್ನು ತಿರುಗಿಸುವುದು – ಕುತ್ತಿಗೆಯನ್ನು ಮೇಲಕ್ಕೆ ತೆಗೆದುಕೊಂಡು ಹೋಗುವಾಗ ಉಸಿರು ತೆಗೆದುಕೊಳ್ಳುವುದು, ಕುತ್ತಿಗೆಯನ್ನು ಕೆಳಗೆ ತರುವಾಗ ಉಸಿರನ್ನು ಬಿಡುತ್ತಾ ಬರುವುದು. ಕುತ್ತಿಗೆಗೆ ಮಾಡುವ ಈ ವ್ಯಾಯಾಮಗಳಿಂದ ಕುತ್ತಿಗೆ ನೋವುಗಳು ನಿವಾರಣೆಯಾಗುತ್ತವೆ, ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧಿಸುತ್ತದೆ ಮತ್ತು ಮೈಗ್ರೇನ್ ತಲೆನೋವು ನಿಯಂತ್ರಣವಾಗುತ್ತದೆ.

    ಭುಜಗಳಿಗೆ ವ್ಯಾಯಾಮ: ಎರಡೂ ಕೈಗಳನ್ನು ಭುಜಗಳಿಗೆ ಸ್ಪರ್ಶಿಸಿ, ಮೊಣಕೈಗಳನ್ನು ಕೂಡಿಸಬೇಕು. ಮಡಿಸಿದ ಮೊಣಕೈಗಳನ್ನು ಕ್ಲಾಕ್​ವೈಸ್ ಮತ್ತು ಆ್ಯಂಟಿಕ್ಲಾಕ್​​ವೈಸ್ ತಿರುಗಿಸುವುದು. ಇದರಿಂದ ಭುಜಗಳು, ಕುತ್ತಿಗೆಯ ಭಾಗ ಬಲಿಷ್ಠವಾಗುತ್ತವೆ. ಫ್ರೋಜನ್​ ಶೋಲ್ಡರ್​ ಸಮಸ್ಯೆ ನಿಯಂತ್ರಣವಾಗುತ್ತದೆ.

    ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

    ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts