More

    ಎರಡು ದಿನಗಳ ರಜತ ಉತ್ಸವಕ್ಕೆ ವರ್ಣರಂಜಿತ ತೆರೆ

    ಕೊಪ್ಪಳ: ಎರಡು ದಿನಗಳ ಕಾಲ ಜಿಲ್ಲಾದ್ಯಂತ ನಡೆದ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಶನಿವಾರ ಅಂತಿಮ ತೆರೆ ಎಳೆಯಲಾಯಿತು. ಗಣ್ಯರು, ಹೋರಾಟಗಾರರು ಜಿಲ್ಲಾ ರಚನೆ ಹೋರಾಟ, 25 ವರ್ಷಗಳ ಏಳು-ಬೀಳುಗಳನ್ನು ನೆನೆದರು. ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಹಾಗೂ ಪ್ರತಿ ವರ್ಷ ಜಿಲ್ಲಾ ಉತ್ಸವ ಆಚರಿಸುವಂತೆ ಆಶಯ ವ್ಯಕ್ತಪಡಿಸಿದರು.

    ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಇದು ನಮ್ಮ ಜಿಲ್ಲೆಯ ಹಬ್ಬ. ಇದೊಂದು ಸಂಭ್ರಮ. ಈ ಸವಿ ನೆನಪನ್ನು ಮೇಲಿಂದ ಮೇಲೆ ಸವಿಯಲಾಗದು. ಆಡಳಿತ ವಿಕೇಂದ್ರೀಕರಣ ಆಗಬೇಕೆಂಬ ಸದಾಶಯದಿಂದ ಜೆ.ಎಚ್.ಪಟೇಲರು ಕೊಪ್ಪಳ ಸೇರಿ ಏಳು ಜಿಲ್ಲೆ ಘೋಷಿಸಿದರು. ಚುನಾವಣೆ ಹತ್ತಿರದಲ್ಲಿದ್ದು, ಜನಪ್ರತಿನಿಧಿಗಳು ಉತ್ಸವಕ್ಕೆ ಉತ್ಸಾಹ ತೋರುತ್ತಿಲ್ಲವೆಂದು ಜನರು ಟೀಕಿಸಿದರು. ಹೀಗಾಗಿ ಜಿಲ್ಲಾಧಿಕಾರಿ ಆಸಕ್ತಿವಹಿಸಿ ನಮ್ಮ ಮನವೊಲಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಅನೇಕ ಗೋಷ್ಠಿಗಳನ್ನು ನಡೆಸಲಾಗಿದೆ. ಚರ್ಚೆ, ವಿಮರ್ಶೆಗಳಾಗಿವೆ. ಹಬ್ಬ, ಉತ್ಸವಗಳು ನಮ್ಮನ್ನೆಲ್ಲ ಬೆಸೆಯಲು ಕಾರಣವಾಗುತ್ತವೆ. ನಾವೆಲ್ಲ ಸೇರಿ ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ. ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರುವವರು ಈ ನಿಟ್ಟಿನಲ್ಲಿ ಯೋಚಿಸಲಿ ಎಂದರು.


    ಡಿಸಿ ಎಂ.ಸುಂದರೇಶ ಬಾಬು ಮಾತನಾಡಿ, ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇದೇ ವರ್ಷ ರಜತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಕೊಪ್ಪಳದೊಂದಿಗೆ ಆರು ಜಿಲ್ಲೆಗಳಾಗಿವೆ. ನಾವೇ ಮೊದಲನೆಯದಾಗಿ ಉತ್ಸವ ಆಚರಿಸಿದ್ದೇವೆ. ಅನೇಕರ ಶ್ರಮದಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಜಿಲ್ಲೆಯ ಜನರೆಲ್ಲರ ಹೋರಾಟದ ಫಲವಾಗಿ ಕೊಪ್ಪಳ ಜಿಲ್ಲೆಯಾಗಿದೆ. ಜಿಲ್ಲೆ ರಚನೆಗೆ ಕಾರಣರಾದ ಜೆ.ಎಚ್.ಪಟೇಲರನ್ನು ನಾವೆಲ್ಲ ನೆನೆಯಬೇಕು. ಜಿಲ್ಲೆಯ ಜನರನ್ನು ಒಳಗೊಂಡು ಉತ್ಸವ ಆಚರಿಸುವ ನಿಟ್ಟಿನಲ್ಲಿ ಶಾಲಾ, ಕಾಲೇಜು ಮಟ್ಟದಲ್ಲಿ ಕ್ರೀಡೆ ಆಯೋಜಿಸಲಾಗಿತ್ತು. 120ಕ್ಕೂ ಹೆಚ್ಚು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಜಿಲ್ಲೆಯ ಜನರು ನಮಗೆ ಬೆಂಬಲ ನೀಡಿದ್ದೀರಿ. ಇದರಿಂದ ನಮಗೆ ಉತ್ಸಾಹ ಇಮ್ಮಡಿಗೊಂಡಿದ್ದು, ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇನ್ನಷ್ಟು ಶ್ರಮಿಸುತ್ತೇವೆ ಎಂದರು.

    ಸಮಾರೋಪಕ್ಕೂ ಬಾರದ ಸಿಂಗ್: ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಎರಡನೇ ದಿನದ ಸಮಾರೋಪ ಸಮಾರಂಭಕ್ಕೂ ಗೈರಾದರು. ಬೆಳಗ್ಗೆ ಹೊಸಪೇಟೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಂಜೆ ಕೊಪ್ಪಳಕ್ಕೆ ಬರುವುದಾಗಿ ಜಿಲ್ಲಾಡಳಿತ ಹಾಗೂ ಜನರು ನಿರೀಕ್ಷಿಸಿದ್ದರು. ಆದರೆ ಸಿಂಗ್ ಬಾರದ ಕಾರಣ ಸಮಾರೋಪ ಸಮಾರಂಭ ನಡೆಸಿ ಉತ್ಸವಕ್ಕೆ ತೆರೆ ಎಳೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts