More

    ಬೆಳ್ಳಿ ಉದ್ಯಮಕ್ಕೂ ತಟ್ಟಿದ ಲಾಕ್‌ಡೌನ್ ಬಿಸಿ

    ಬೋರಗಾಂವ: ಗಡಿಭಾಗದ ಮಾಂಗೂರ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಹಲವು ಕುಟುಂಬಗಳು ಬೆಳ್ಳಿ ಆಭರಣಗಳ ತಯಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿವೆ. ಆದರೆ, ಲಾಕ್‌ಡೌನ್ ವಿಸ್ತರಣೆಯಿಂದ ಆಭರಣ ತಯಾರಕರ ಬದುಕು ತತ್ತರಿಸಿದೆ.

    ಚಂದೇರಿ ನಗರ ಎಂದು ಹೆಸರಾದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹುಪರಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ನಿಪ್ಪಾಣಿ ತಾಲೂಕಿನ ಮಾಂಗೂರ ಹಾಗೂ ಕುನ್ನೂರ, ಬಾರವಾಡ, ಕಾರದಗಾ ಗ್ರಾಮದ ಪ್ರತಿ ಮನೆಗಳಲ್ಲಿ ಬೆಳ್ಳಿ ಆಭರಣ ತಯಾರಿಸುವ ಕುಶಲಕರ್ಮಿಗಳು ಇದ್ದಾರೆ. ಮಾಂಗೂರ ಗ್ರಾಮದಲ್ಲಿ ಬೆಳ್ಳಿ ಉದ್ಯಮ ದೊಡ್ಡದಾಗಿ ಬೆಳೆದಿದೆ.

    ಈ ಗ್ರಾಮದಲ್ಲಿ ಸುಮಾರು 200ಕ್ಕಿಂತ ಹೆಚ್ಚು ಬೆಳ್ಳಿ ಆಭರಣ ತಯಾರಿಕೆ ಘಟಕಗಳಿವೆ. ಆದರೆ, ಲಾಕ್‌ಡೌನ್‌ನಿಂದ ಈ ಘಟಕಗಳು ಬಂದ್ ಆಗಿದ್ದರಿಂದ ಕುಶಲಕರ್ಮಿಗಳಿಗೆ ಕೆಲಸ ದೊರೆಯುತ್ತಿಲ್ಲ. ಹೀಗಾಗಿ ಅಸಂಘಟಿತ ವಲಯದ ಈ ಕುಶಲಕರ್ಮಿಗಳು ಕುಟುಂಬ ನಿರ್ವಹಣೆಗಾಗಿ ಹೆಣಗಾಡುವಂತಾಗಿದೆ.ಕುಶಲಕರ್ಮಿಯೊಬ್ಬ ಇಡೀ ದಿನ ಬೆಳ್ಳಿ ಆಭರಣ ಜೋಡಣೆ, ಕುಸುರಿ ಕೆತ್ತನೆಯಿಂದ 200ರಿಂದ 300 ರೂ. ದುಡಿದು ಉಪಜೀವನ ನಡೆಸುತ್ತಾನೆ.

    ಬಿಡುವಿನ ವೇಳೆಯಲ್ಲಿ ಮಹಿಳೆಯರೂ ಬೆಳ್ಳಿ ಆಭರಣ ತಯಾರಿಸಿ ತಿಂಗಳಿಗೆ 3-4 ಸಾವಿರ ರೂ. ಸಂಪಾದಿಸುತ್ತಾರೆ. ಆದರೆ, ಸದ್ಯ ಲಾಕ್‌ಡೌನ್‌ನಿಂದ ಬೆಳ್ಳಿ ಉದ್ಯಮವೇ ಸ್ತಬ್ಧಗೊಂಡಿದ್ದು, ಕುಶಲಕರ್ಮಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರ ಕೂಡಲೇ ಬೆಳ್ಳಿ ತಯಾರಿಕೆ ಕುಶಲಕರ್ಮಿಗಳಿಗೆ ಸಹಾಯಧನ ನೀಡಬೇಕು ಎಂದು ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಲಾಕ್‌ಡೌನ್‌ನಿಂದ ಬೆಳ್ಳಿ ಉದ್ಯಮವೇ ಸ್ತಬ್ಧಗೊಂಡಿದೆ. ಇದರಿಂದ ಬೆಳ್ಳಿ ತಯಾರಿಕೆ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಸಹಾಯಧನ ನೀಡಬೇಕು.
    | ಬಾಳಾಸೋ ನೇಮು ಕುರಾಡೆ ಬೆಳ್ಳಿ ಆಭರಣ ತಯಾರಕ, ಮಾಂಗೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts