More

    ಮೇಣದಲ್ಲಿ ಜೀವಂತಿಕೆ ಪಡೆದ ಕವಯಿತ್ರಿ

    ಧನಂಜಯ ಎಸ್.ಹಕಾರಿ ದಾವಣಗೆರೆ

    ಆ ಮನೆಗೆ ನೀವು ಭೇಟಿ ಕೊಟ್ಟರೆ, ಯುವತಿಯೊಬ್ಬಳು ಕುರ್ಚಿ ಮೇಲೆ ಕುಳಿತಿರುವುದನ್ನು ಕಾಣುತ್ತೀರಿ. ಹತ್ತಿರ ಹೋಗುವವರೆಗೆ ಅದೊಂದು ಮೇಣದ ಪ್ರತಿಮೆ ಎಂದು ನಿಮಗೆ ತಿಳಿಯುವುದೇ ಇಲ್ಲ!

    ದೂರವಾದ ಮಗಳನ್ನು ತಾಯಿಯ ಮಮತೆ ಹತ್ತಿರವಾಗಿಟ್ಟುಕೊಂಡ ಘಟನೆ ಇದು. ಪುತ್ರಿ ಕಾವ್ಯಾ ಕ್ಯಾನ್ಸರ್‌ಗೆ ಬಲಿಯಾಗಿ ವರ್ಷವೇ ಕಳೆದಿದೆ. ಆದರೆ, ಆಕೆಯನ್ನು ಮೇಣದ ಪ್ರತಿಮೆಯ ಮೂಲಕ ಜೀವಂತವಾಗಿರಿಸಿಕೊಂಡಿದ್ದಾರೆ ತಾಯಿ, ನಿವೃತ್ತ ಶಿಕ್ಷಕಿ ಕಮಲಮ್ಮ.

    ಕವಯಿತ್ರಿಯೂ ಆದ ಕಾವ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ದಾವಣಗೆರೆಯಲ್ಲಿ ನೆಲೆಸಿದ್ದರು. ಹೊಳಲ್ಕೆರೆಯ ಗ್ಯಾರಹಳ್ಳಿಯಲ್ಲಿ 1992ರ ಅ.6 ರಂದು ಜನಿಸಿದ ಆಕೆ, 12 ದಿನದಲ್ಲಿ ತಂದೆಯನ್ನು ಕಳೆದುಕೊಂಡರು. ಹಸುಗೂಸಿನ ಲಾಲನೆ-ಪಾಲನೆಯ ಹೊಣೆ ತಾಯಿಯ ಹೆಗಲೇರಿತು.

    ರೋಟರಿ ಶಾಲೆಯಲ್ಲಿ ಆಗ 300 ರೂ. ಸಂಬಳಕ್ಕೆ ಶಿಕ್ಷಕಿಯಾಗಿದ್ದ ಕಮಲಮ್ಮ, 1994ರಲ್ಲಿ ಗ್ಯಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ನೇಮಕವಾದರು.

    ದಂಡಿಗೇನಹಳ್ಳಿ, ವಿಶ್ವನಾಥನಹಳ್ಳಿ, ಜೋಗಿಮಟ್ಟಿ ರಸ್ತೆಯಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟಾರೆ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.

    ಕವಿಗೋಷ್ಠಿಯಲ್ಲಿ ಉದ್ಘಾಟಕಿ: ಹೆಸರಿಗೆ ತಕ್ಕಂತೆ ಕಾವ್ಯಾಳಿಗೆ ಬಾಲ್ಯದಿಂದಲೇ ಕಲೆ, ಸಾಹಿತ್ಯ, ಕವನ ರಚನೆಯಲ್ಲಿ ಆಸಕ್ತಿ ಇತ್ತು. ಹೈಸ್ಕೂಲ್‌ನಲ್ಲಿ ಓದುವಾಗ ಮೈಸೂರಿನಲ್ಲಿ ನಡೆದಿದ್ದ ಕವಿಗೋಷ್ಠಿಯೊಂದರ ಉದ್ಘಾಟಕಿಯಾಗಿ ಗೌರವ ಸ್ವೀಕರಿಸಿದ್ದರು.

    ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನ, ಲಕ್ಕುಂಡಿ ಉತ್ಸವ, ಕವಿಗೋಷ್ಠಿ, ಹುಬ್ಬಳ್ಳಿಯಲ್ಲಿ ನಡೆದಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನ, ಮೈಸೂರಿನ ದಸರಾ ಕವಿಗೋಷ್ಠಿ, ಕಾರಿಗನೂರು, ಸಂತೇಬೆನ್ನೂರು ಸಮ್ಮೇಳನ, ದಾವಣಗೆರೆ ಜಿಲ್ಲಾ ಸಮ್ಮೇಳನ, ಚಿತ್ರದುರ್ಗದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದರು.

    ನಂತರ ಇಂಜಿನಿಯರಿಂಗ್ ಓದಿ, ಬೆಂಗಳೂರಿನಲ್ಲಿ 2 ವರ್ಷ ಸಾಫ್ಟ್‌ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು. 2019 ರ ಜನವರಿಯಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆ ಸಿದ್ಧತೆಯಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾದರು.

    ನಾಲ್ಕು ವರ್ಷದಲ್ಲಿ 36 ಲಕ್ಷ ರೂ. ಖರ್ಚು: 2019ರಲ್ಲಿ ಮಾರಕ ಕ್ಯಾನ್ಸರ್‌ಗೆ ತುತ್ತಾದ ಕಾವ್ಯ 4 ವರ್ಷಗಳ ಕಾಲ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ನಿವೃತ್ತ ಶಿಕ್ಷಕಿಯಾದ ತಾಯಿ ತಮ್ಮ ಸೇವಾವಧಿಯ ಹಣವನ್ನೆಲ್ಲಾ ಮಗಳ ಚಿಕಿತ್ಸೆಗೆ ಖರ್ಚು ಮಾಡಿದರು.

    ಆದರೂ ಕಾವ್ಯ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಹದ ಬಹುತೇಕ ಅಂಗಗಳಿಗೆ ಕಾಯಿಲೆ ವ್ಯಾಪಿಸಿದ ಪರಿಣಾಮ 2022 ರ ಡಿ.10 ರಂದು ಕಾವ್ಯ ಕೊನೆಯುಸಿರೆಳೆದರು.

    ಮಗಳ ಆಸೆಯಂತೆ ಸಮಾಜಸೇವೆ: ಕಾವ್ಯಳ ನೆನಪಿಗಾಗಿ ಕಮಲಮ್ಮ ನಿರಾಶ್ರಿತರು, ನಿರ್ಗತಿಕರು, ಅಂಧರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಡ ಕ್ರಾಸ್‌ನಲ್ಲಿನ ಅಂಧರ ಕೇಂದ್ರಕ್ಕೆ ಇತ್ತೀಚೆಗೆ ನೂತನ ಗೇಟ್ ಮಾಡಿಸಿದ್ದಾರೆ.

    ಸಮಾಧಿ ಇರುವ ಗೋಪನಾಳ್‌ನಲ್ಲಿ 4 ಗುಂಟೆ ಜಮೀನು ತೆಗೆದುಕೊಂಡು ವಿವಿಧ ಗಿಡಗಳನ್ನು ನೆಟ್ಟು ಉದ್ಯಾನ ನಿರ್ಮಿಸಿದ್ದಾರೆ. ಮಗಳು ಬರೆದಿರುವ ಕವನಗಳನ್ನು ಸಂಗ್ರಹಿಸಿ ‘ಕಾವ್ಯ ಕನ್ನಿಕೆ’ ಎಂಬ ಪುಸ್ತಕ ಹೊರತಂದಿದ್ದಾರೆ.

    ಪ್ರತಿಮೆಯಾಗಿ ಜೀವಂತ: ವರ್ಷದ ಪುಣ್ಯಸ್ಮರಣೆಯ ದಿನದಂದೇ ಮಗಳ ಮೇಣದ ಪ್ರತಿಮೆ ಮನೆಗೆ ಬಂದಿದೆ. ನನ್ನ ಮಗಳು ಎಲ್ಲಿಯೂ ಹೋಗಿಲ್ಲ. ಎಂದಿಗೂ ನನ್ನ ಜತೆಯಲ್ಲಿಯೇ ಇರುತ್ತಾಳೆ ಎಂದು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಕಮಲಮ್ಮ.

    ಕಾವ್ಯಾ ಅವರ ಕೊನೆಯ ಆಸೆಯಂತೆ ಸಿಲಿಕಾನ್ ವ್ಯಾಕ್ಸ್‌ನಲ್ಲಿ ಕಾವ್ಯಾ ಅವರ ಪ್ರತಿಮೆ ನಿರ್ಮಾಣವಾಗಿದೆ. ಬೆಂಗಳೂರಿನ ಕಲಾವಿದ ವಿಶ್ವನಾಥ್ ಮಾನವಸ್ಪರ್ಶಿ ಗುಣ ಹೊಂದಿರುವ ಈ ಪ್ರತಿಮೆ ನಿರ್ಮಿಸಲು 10 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಇದಕ್ಕೆ 3.30 ಲಕ್ಷ ರೂ. ವೆಚ್ಚವಾಗಿದೆ.

    ಪ್ರತಿಮೆಯ ತೂಕ 25 ಕೆಜಿ: ಸಿಲಿಕಾನ್ ವ್ಯಾಕ್ಸ್‌ನಿಂದ ಮಾಡಿರುವ ಕಾವ್ಯ ಅವರ ಪ್ರತಿಮೆ 25 ಕೆಜಿ ತೂಗುತ್ತಿದೆ.

    ಉತ್ತಮ ಫಿನಿಷಿಂಗ್‌ಗಾಗಿ ಕೂದಲು, ಕೆಲವೊಂದು ವಸ್ತುಗಳನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ದಾವಣಗೆರೆ ಫೈನ್ ಆರ್ಟ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿ ಕಲಾವಿದ ವಿಶ್ವನಾಥ್ ಮಲವಾಡೆ ವಿಜಯವಾಣಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts