More

    ಸೈಲೆಂಟ್​ ಕಿಲ್ಲರ್! ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್​, ಈ ರೋಗ ಲಕ್ಷಣ ನಿರ್ಲಕ್ಷಿಸಿದ್ರೆ ಸಾವು ಗ್ಯಾರಂಟಿ

    ನವದೆಹಲಿ: ಸ್ಟ್ರೋಕ್​ ಅಥವಾ ಪಾರ್ಶ್ವವಾಯು, ಹಿರಿಯರಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ, ಇಂದು ಯಾವುದೇ ವಯಸ್ಸಿನ ಭೇದವಿಲ್ಲದೆ ಹದಿಹರೆಯದವರಿಂದ ಹಿಡಿದು ಯುವ ಜನಾಂಗವನ್ನು ಸಹ ಕಾಡುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಸಹ ತುಂಬಾ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

    ಲಭ್ಯವಿರುವ ದತ್ತಾಂಶಗಳ ಪ್ರಕಾರ ಪ್ರತಿ 100 ರೋಗಿಗಳಲ್ಲಿ 20 ವರ್ಷಕ್ಕಿಂತ ಕೆಳಗಿರುವ ಇಬ್ಬರು ಸ್ಟ್ರೋಕ್​ನಿಂದ ಬಳಲುತ್ತಿದ್ದು ಏಮ್ಸ್​ನ ನರವಿಜ್ಞಾನ ವಿಭಾಗಕ್ಕೆ ದಾಖಲಾಗುತ್ತಿದ್ದಾರೆ. ಕಳೆದ ವರ್ಷ 6 ರೋಗಿಗಳು ಸ್ಟ್ರೋಕ್​ನಿಂದ ದಾಖಲಾಗಿದ್ದರು. ಇದು ಸಂಖ್ಯೆಯ ವಿಚಾರದಲ್ಲಿ ಕಳವಳಕಾರಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾನ್ಯವಾಗಿ ಯಾವುದೇ ಎಚ್ಚರಿಕೆಯ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಹೊಂದಿರದ ಅಧಿಕ ರಕ್ತದೊತ್ತಡವು ದಾಖಲಾಗುತ್ತಿರುವ ರೋಗಿಗಳಲ್ಲಿ ಮುಖ್ಯ ರೋಗ ಲಕ್ಷಣವಾಗಿದೆ. 21 ರಿಂದ 45ರ ನಡುವಿನ ವಯಸ್ಕರಲ್ಲಿ ಸ್ಟ್ರೋಕ್​ ಸ್ಥಿತಿ ತುಂಬಾ ಕೆಟ್ಟದಾಗಿದೆ. ಒಂದು ವರ್ಷದಲ್ಲಿ 300 ರಲ್ಲಿ 77 ರೋಗಿಗಳು ಪಾರ್ಶ್ವವಾಯು ಕಾರಣದಿಂದಲೇ ದಾಖಲಾಗಿದ್ದಾರೆ ಎಂದು ಡೇಟಾಗಳು ತಿಳಿಸಿವೆ.

    ಅಧಿಕ ರಕ್ತದೊತ್ತಡ ಹೆಚ್ಚು
    ಈ ಬಗ್ಗೆ ಏಮ್ಸ್​ ನರವಿಜ್ಞಾನ ವಿಭಾಗದ ಹೆಚ್ಚುವರಿ ಫ್ರೊಫೆಸರ್​ ಅವಾಧ್​ ಕಿಶೋರ್​ ಪಂಡಿತ್​ ಮಾಹಿತಿ ನೀಡಿದ್ದು, ಲಭ್ಯವಿರುವ ಮಾಹಿತಿಯ ಪ್ರಕಾರ, ಏಮ್ಸ್​ನಲ್ಲಿ ವರದಿಯಾದ ಸ್ಟ್ರೋಕ್ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಐದು ವರ್ಷಗಳ ಹಿಂದೆ ಪ್ರಕಟಿಸಲಾದ ಏಮ್ಸ್​ ನಡೆಸಿದ ಅಧ್ಯಯನದಲ್ಲಿ ಒಟ್ಟು 260 ರೋಗಿಗಳಲ್ಲಿ ಶೇ. 65 ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದಿದೆ ಎಂದು ಹೇಳಿದ್ದಾರೆ.

    ಸ್ಟ್ರೋಕ್​ಗೆ ಕಾರಣವೇನು?
    ವಿಶ್ವದಾದ್ಯಂತ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿರುವ ಪಾರ್ಶ್ವವಾಯು, ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ, ರಕ್ತನಾಳಗಳ ಮುಚ್ಚುವಿಕೆ (ಇಸ್ಕೆಮಿಕ್ ಸ್ಟ್ರೋಕ್) ಮತ್ತು ರಕ್ತನಾಳಗಳ ಛಿದ್ರ (ರಕ್ತಸ್ರಾವಕ ಸ್ಟ್ರೋಕ್) ದಿಂದ ಉಂಟಾಗುವ ಮೆದುಳು, ರೆಟಿನಾ ಮತ್ತು ಬೆನ್ನುಹುರಿಯ ಅಸ್ವಸ್ಥತೆಯಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ, ಹೃದಯ ಬಡಿತದ ಅಸಹಜತೆ ಮತ್ತು ಜಡ ಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಣ ಮಾಡುವುದರಿಂದ ಶೇ. 85% ಪಾರ್ಶ್ವವಾಯುಗಳನ್ನು ತಡೆಯಬಹುದು ಎಂದು ಡಾ ಪಂಡಿತ್ ಹೇಳಿದರು.

    ಇವುಗಳನ್ನು ತಪ್ಪಿಸಿ
    ಮಧುಮೇಹ, ಲಿಪಿಡ್ ಅಸ್ವಸ್ಥತೆಗಳು, ಬೊಜ್ಜು, ಧೂಮಪಾನ, ಮದ್ಯಪಾನ ಮತ್ತು ದೈಹಿಕ ನಿಷ್ಕ್ರಿಯತೆಯಂತಹ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳು ಹೃದಯದ ರಕ್ತನಾಳದ ಸಮಸ್ಯೆಗಳಿಗೆ ಹೆಚ್ಚಿನ ಪ್ರಭಾವ ಬೀರುತ್ತವೆ. ಇವು ಶೇ. 50 ಕ್ಕಿಂತ ಹೆಚ್ಚಿನ ಸ್ಟ್ರೋಕ್ ಪ್ರಕರಣಗಳಿಗೆ ಕೊಡುಗೆ ನೀಡುತ್ತವೆ. ಆದಾಗ್ಯೂ, ಕೆಲವು ಸಾಂಪ್ರದಾಯಿಕವಲ್ಲದ ಅಪಾಯಕಾರಿ ಅಂಶಗಳಾದ ಒತ್ತಡ, ಮಾದಕ ವ್ಯಸನ, ನಿದ್ರಾಹೀನತೆ ಮತ್ತು ಖಿನ್ನತೆಯು ಸುಮಾರು 40 ರಿಂದ 50 ಪ್ರತಿಶತ ಪ್ರಕರಣಗಳಲ್ಲಿ ಪಾರ್ಶ್ವವಾಯು ಉಂಟುಮಾಡುತ್ತದೆ. ಹೆಚ್ಚುವರಿಯಾಗಿ, ಕುತ್ತಿಗೆಯ ಸೆಳೆತಗಳು, ಹಠಾತ್ ಕುತ್ತಿಗೆ ತಿರುಚುವುದು, ಜಿಮ್​ ಮಾಡುವ ಸಮಯದಲ್ಲಿ ಮತ್ತು ಸಲೂನ್‌ಗಳಲ್ಲಿ ಅಸಹಜ ಕುತ್ತಿಗೆ ಚಲನೆಗೆ ಒಳಗಾಗುವಾಗ ಪಾರ್ಶ್ವವಾಯುಗಳು ಸಂಭವಿಸುವ ಸಾಧ್ಯತೆಯೂ ಇದೆ.

    ರಕ್ತ ಪರೀಕ್ಷೆ ಮಾಡಿಸಿ
    ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸಲಹೆ ನೀಡಿರುವ ಡಾ. ಪಂಡಿತ್​, ವೈದ್ಯರು ಹೇಳಿದಾಗ ಮಾತ್ರವಲ್ಲ, ಪ್ರತಿಯೊಬ್ಬರೂ ಆಗಾಗ ರಕ್ತ ಪರೀಕ್ಷೆ ಮಾಡಿಸಬೇಕು ಎಂದಿದ್ದಾರೆ. ಈ ಅಭ್ಯಾಸವು ಹಲವಾರು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡಬಹುದು ಎಂದಿದ್ದಾರೆ. ಈ ಬಿಪಿ ಪರಿಶೀಲನಾ ಸೌಲಭ್ಯಗಳು ಕೇವಲ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಸೀಮಿತವಾಗಿರಬಾರದು, ಬದಲಾಗಿ ಮಾಲ್‌ಗಳು, ಫಿಟ್‌ನೆಸ್ ಸೆಂಟರ್‌ಗಳು, ಸಲೂನ್‌ಗಳು, ವಿಮಾನ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ಕಿಯೋಸ್ಕ್‌ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

    ಡಬ್ಲ್ಯುಎಚ್​ಒ ಎಚ್ಚರಿಕೆ
    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅಧಿಕ ರಕ್ತದೊತ್ತಡವು ಪ್ರಪಂಚದಾದ್ಯಂತ ಮೂವರು ವಯಸ್ಕರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಈ ಸಾಮಾನ್ಯ, ಮಾರಣಾಂತಿಕ ಸ್ಥಿತಿಯು ಪಾರ್ಶ್ವವಾಯು, ಹೃದಯಾಘಾತ, ಹೃದಯ ವೈಫಲ್ಯ, ಮೂತ್ರಪಿಂಡದ ಹಾನಿ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವವರ ಸಂಖ್ಯೆ 1990 ಮತ್ತು 2019ರ ನಡುವೆ 650 ಮಿಲಿಯನ್‌ನಿಂದ 1.3 ಶತಕೋಟಿಗೆ ದ್ವಿಗುಣಗೊಂಡಿದೆ. ಜಾಗತಿಕವಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಅರ್ಧದಷ್ಟು ಜನರು ಪ್ರಸ್ತುತ ತಮ್ಮ ಸ್ಥಿತಿಯ ಬಗ್ಗೆ ತಿಳಿದೇ ಇಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಕರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು WHO ತಿಳಿಸಿದೆ. (ಏಜೆನ್ಸೀಸ್​)

    ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಸ್ಕೀಮ್​ ರದ್ದಾಗುತ್ತಾ? ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್​

    https://www.vijayavani.net/wp-admin/post.php?post=1942493&action=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts