More

    ಸಿಎಂ ಬೊಮ್ಮಾಯಿಗೆ ಶುಭಾಶಯ; ಬಿಎಸ್​​ವೈಗೆ, ಬಿಜೆಪಿಗೆ ಟಾಂಗ್! ಮಾರ್ಮಿಕ ಸಂದೇಶ ನೀಡಿದ ಸಿದ್ದರಾಮಯ್ಯ

    ಬೆಂಗಳೂರು : ರಾಜ್ಯದ ಹೊಸ ಸಿಎಂ ಆಗಿ ಇಂದು ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವಿಟರ್ ಮುಖೇನ ಶುಭಾಶಯ ಕೋರಿದ್ದಾರೆ. ವಿರೋಧಪಕ್ಷವಾಗಿ ರಚನಾತ್ಮಕವಾಗಿ ಕೊಡುಗೆ ನೀಡಲು ಉತ್ಸುಕರಾಗಿದ್ದೇವೆ, ರಾಜ್ಯ ಬಿಜೆಪಿಯಿಂದ ಅದೇ ರೀತಿಯ ಸಹಕಾರ ಅಪೇಕ್ಷಿಸುತ್ತೇವೆ ಎಂದಿರುವ ಅವರು, ಕೆಲವು ಮಾರ್ಮಿಕ ಸಂದೇಶ ನೀಡಿದ್ದಾರೆ.

    ಬಿಜೆಪಿ ಸರ್ಕಾರದ ವಿರುದ್ಧ ಟೀಕೆಯಿಂದ ಕೂಡಿದ ಸರಣಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, “ಬಿಜೆಪಿಯು ಕಳೆದ 2 ವರ್ಷಗಳಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಬಿ.ಎಸ್.ಯಡಿಯೂರಪ್ಪ ಅವರು, ತಮ್ಮ ಅಧಿಕಾರದಾಸೆಯಿಂದ ಅಥವಾ ಅರಿವಿನ ಕೊರತೆಯಿಂದಲೋ, ಭಯದಿಂದಲೋ ಯಾವಾಗಲೂ ಇದರ ವಿರುದ್ಧ ಮಾತಾಡಿಲ್ಲ. ಬೊಮ್ಮಾಯಿ ಅವರು ಕರ್ನಾಟಕಕ್ಕಾಗಿ ಹೋರಾಡುವ ಧೈರ್ಯ ತೋರಿಸುತ್ತಾರೆ ಎಂದು ಆಶಿಸುತ್ತೇನೆ” ಎಂದಿದ್ದಾರೆ.

    ಇದನ್ನೂ ಓದಿ: ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್​ವೈ ಬಗ್ಗೆ ಪ್ರಶಂಸೆಯ ಮಾತು

    ಮುಂದುವರೆದ ಟ್ವೀಟ್​ನಲ್ಲಿ, “ಜಿಎಸ್ಟಿ, ತೆರಿಗೆ, ಪ್ರವಾಹ ಮತ್ತು ಕೋವಿಡ್ 19 ಪರಿಹಾರಗಳ ಬಗೆಗಿನ ಕರ್ನಾಟಕದ ಕಾಳಜಿಗಳನ್ನು ಉತ್ತರಿಸುವಲ್ಲಿ ಬಿಜೆಪಿಯು ವಿಫಲವಾಗಿದೆ. ಬೊಮ್ಮಾಯಿ, ಈ ವಿಚಾರಗಳನ್ನು ನರೇಂದ್ರ ಮೋದಿ ಅವರ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

    ಜೊತೆಯಲ್ಲೇ, ಯಡಿಯೂರಪ್ಪ ಅವರ ಕಾರ್ಯವೈಖರಿ ಬಗೆಗೂ ಕಹಿ ಮಾತನ್ನಾಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸರ್ವಪಕ್ಷ ಸಭೆಗಳ ಮತ್ತು ನಿಯೋಗಗಳ ಮೂಲಕ ನ್ಯಾಯ ಕೋರುವ ಸಂಪ್ರದಾಯ ಇದೆ. ಆದರೆ ಕಳೆದ 2 ವರ್ಷಗಳಿಂದ ಚರ್ಚೆಗಳು ನಡೆಯದೆ ಸಂಸದೀಯ ಪ್ರಜಾಪ್ರಭುತ್ವವು ಸ್ಥಗಿತಗೊಂಡಿದೆ. ಈ ಪ್ರಜಾಪ್ರಭುತ್ವದ ಸಂಪ್ರದಾಯಗಳು ಬೊಮ್ಮಾಯಿ ಅವರ ಆಡಳಿತದಲ್ಲಿ ಮತ್ತೆ ಆರಂಭವಾಗುತ್ತದೆ ಎಂದು ಆಶಿಸುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ವಿಧಾನಸೌಧದಲ್ಲಿ ಚೊಚ್ಚಲ ಸಭೆ ನಡೆಸಿದ ಸಿಎಂ ಬೊಮ್ಮಾಯಿ

    ಸಾರ್ವಜನಿಕ ಮಹತ್ವದ ಹತ್ತಾರು ಪತ್ರಗಳನ್ನು ಬರೆದರೂ ಪ್ರತಿಕ್ರಿಯಿಸುವ ಸೌಜನ್ಯವನ್ನೂ ಹಿಂದಿನ ಮುಖ್ಯಮಂತ್ರಿಗಳು ತೋರಿಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗಿದೆ. ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಿಮ್ಮ ಕಾಲದಲ್ಲಿಯಾದರೂ ಮಾಹಿತಿ ವಿನಿಮಯ ಸುಗಮವಾಗಿ ನಡೆಯುವಂತೆ ಮಾಡುವಿರೆಂದು ನಂಬಿದ್ದೇನೆ ಎಂದು ಬೊಮ್ಮಾಯಿ ಅವರನ್ನು ಟ್ಯಾಗ್​​ ಮಾಡಿ ಹೇಳಿದ್ದಾರೆ.

    ಮುಖ್ಯಮಂತ್ರಿ ಸ್ಥಾನ ಪಕ್ಷದ ಹುದ್ದೆಯಲ್ಲ, ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ವಿರೋಧ ಪಕ್ಷವಾಗಿ ಸೈದ್ಧಾಂತಿಕ ಸಂಘರ್ಷ ಜಾರಿಯಲ್ಲಿದ್ದರೂ ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬೇಕೆಂದು ನಿಮಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನನ್ನ ಸಲಹೆಯಾಗಿದೆ ಎಂದು ನೂತನ ಸಿಎಂ ಬೊಮ್ಮಾಯಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

    ಜಮೀನು ದಾಖಲಾತಿ ಮಾಡಲು 15 ಲಕ್ಷ ರೂ. ಲಂಚ ಪಡೆಯುತ್ತಾ ಸಿಕ್ಕಿಬಿದ್ದ ತಹಸೀಲ್ದಾರ್

    ಪದಕ ತಂದ ಪದವಿ: ಮೀರಾಬಾಯಿ ಆಗಲಿದ್ದಾರೆ ಉನ್ನತ ಪೊಲೀಸ್​ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts