More

    ಸಿದ್ದರಾಮಯ್ಯ ತವರಲ್ಲಿ ಕೈ-ಕಮಲ ಪ್ರತಿಷ್ಠೆಯ ಜಿದ್ದಾಜಿದ್ದಿ

    ಮೈಸೂರು-ಕೊಡಗು ಕ್ಷೇತ್ರ ವಶಕ್ಕೆ ಕಾಂಗ್ರೆಸ್ ತಂತ್ರ | ರಾಜವಂಶಸ್ಥರ ಕಣಕ್ಕಿಳಿಸಿ ಸ್ಥಾನ ಭದ್ರಕ್ಕೆ ಬಿಜೆಪಿ ಪ್ರತಿತಂತ್ರ

    | ಸದೇಶ್ ಕಾರ್ವಡ್ ಮೈಸೂರು
    ದಶಕಗಳ ಹಿಂದೆ ಕಾಂಗ್ರೆಸ್ ಹಿಡಿತದಲ್ಲಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರಸ್ತುತ ಬಿಜೆಪಿಯ ಭದ್ರಕೋಟೆ. ತನ್ನ ಹಳೆಯ ‘ಕೋಟೆ’ಯನ್ನು ಮತ್ತೆ ವಶಪಡಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದರೆ, ಬಿಜೆಪಿ ಮತ್ತಷ್ಟು ಭದ್ರಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

    ಪ್ರತಿ ಬಾರಿ ಕಾಂಗ್ರೆಸ್, ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳು ಹೊಸ ಮುಖವನ್ನು ಕಣಕ್ಕಿಳಿಸಿವೆ. ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿಗಳ ಬದಲಾವಣೆ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಗೂ ಕಾರಣವಾಗಿದ್ದು, ಇದರಿಂದ ಯಾರಿಗೆ ನಷ್ಟ, ಲಾಭ? ಎಂಬುದು ಚರ್ಚೆಯ ವಿಷಯವಾಗಿದೆ.

    ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಎದುರಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿತ್ತು. ಆದರೆ, ಹೈಕಮಾಂಡ್ ಯದುವೀರ್ ಅವರನ್ನು ಕಣಕ್ಕಿಳಿಸಿ ಕೈಗೆ ಶಾಕ್ ನೀಡಿತು. ಚುನಾವಣೆ ಅಂದರೆ ವಾಕ್ಸಮರ, ಟೀಕೆ ಟಿಪ್ಪಣಿ ಸಹಜ. ಆದರೆ, ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಸಾಹಸಕ್ಕೆ ಕಾಂಗ್ರೆಸ್ ಮುಂದಾಗುತ್ತಿಲ್ಲ. ಇದಕ್ಕೆ ರಾಜಮನೆತನದೊಂದಿಗೆ ಮೈಸೂರಿಗರು ಹೊಂದಿರುವ ಭಾವನಾತ್ಮಕ ಸಂಬಂಧವೇ ಪ್ರಮುಖ ಕಾರಣ. ಬಿಜೆಪಿಗೆ ಇದುವೇ ಟ್ರಂಪ್ ಕಾರ್ಡ್.

    ಕಲಮಪಡೆಯ ಈ ಟ್ರಂಪ್​ಕಾರ್ಡ್​ಗೆ ಪ್ರತಿಯಾಗಿ ಕಾಂಗ್ರೆಸ್ ಒಕ್ಕಲಿಗ ‘ಕಾರ್ಡ್’ ಪ್ಲೇ ಮಾಡಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿದ್ದು, ಇದರ ಪೂರ್ಣ ಲಾಭ ಪಡೆಯಲು ಕಾಂಗ್ರೆಸ್ ಒಕ್ಕಲಿಗ ಸಮುದಾ ಯದ ಎಂ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿದೆ. ಈ ಲೆಕ್ಕಾಚಾರ ಸುಲಭವಾಗಿ ಪಕ್ಷಕ್ಕೆ ಒಕ್ಕಲಿಗ ಮತಗಳನ್ನು ತಂದುಕೊಡಬಲ್ಲದು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಯ ಪ್ರತಾಪ್ ಸಿಂಹ ಎರಡು ಬಾರಿ ಗೆಲುವು ಸಾಧಿಸಲು ಜೆಡಿಎಸ್ ಕಾರ್ಯಕರ್ತರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಬಾರಿ ಜೆಡಿಎಸ್ ಎನ್​ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಿದೆ. ಆದರೆ, ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಸಹಜವಾಗಿಯೇ ಸಮುದಾಯದ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮೈಸೂರು ರಾಜಮನೆತನದ ಬಗ್ಗೆ ಗೌರವವಿದೆ ಎನ್ನುತ್ತಲೇ ಈ ಚುನಾವಣೆಯನ್ನು ‘ರಾಜವಂಶಸ್ಥ -ಕಾಮನ್​ವ್ಯಾನ್’ ನಡುವಿನ ಫೈಟ್ ಎಂದು ಕಾಂಗ್ರೆಸ್ ಕರೆದಿರುವುದು ರೋಚಕತೆ ಹೆಚ್ಚಿಸಿದೆ.

    ಅಭ್ಯರ್ಥಿಗಳ ಪ್ಲಸ್-ಮೈನಸ್: ರಾಜಮನೆತನದ ಹಿನ್ನೆಲೆ, ಪ್ರಧಾನಿ ಮೋದಿ ನಾಯಕತ್ವ, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿಗೆ ವರದಾನವಾಗಲಿದೆ. ಆದರೆ, ರಾಜಮನೆತನದವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವರೇ, ಸುಲಭವಾಗಿ ಕೈಗೆ ಸಿಗುವರೇ ಎಂಬುದು ಮತದಾರರ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು, ಸಿಎಂ, ಡಿಸಿಎಂ ನಾಯಕತ್ವ ಕಾಂಗ್ರೆಸ್ ಅಭ್ಯರ್ಥಿಗೆ ಶ್ರೀರಕ್ಷೆಯಾಗಿದೆ. ಆದರೆ, ಯದುವೀರ್​ಗೆ ಹೋಲಿಸಿದರೆ ಲಕ್ಷ್ಮಣ್ ಜನಪ್ರಿಯತೆ ಕಡಿಮೆ ಎನ್ನಬಹುದು.

    ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ 10,17,120 ಪುರುಷ, 10,55,035 ಮಹಿಳೆ, 182 ತೃತೀಯ ಲಿಂಗಿ ಮತದಾರರು ಇದ್ದಾರೆ. ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನದಲ್ಲಿ ದಲಿತ, ಮುಸ್ಲಿಂ, ಕುರುಬ, ವೀರಶೈವ ಲಿಂಗಾಯತ, ಬ್ರಾಹ್ಮಣ, ಕೊಡವ, ನಾಯಕ ಹಾಗೂ ಇತರ ಸಮುದಾಯಗಳಿವೆ. ಒಕ್ಕಲಿಗರು ಯಾರ ಕಡೆಗೆ ಒಲವು ತೋರುತ್ತಾರೆ ಎಂಬ ಕುತೂಹಲ ಇದೆ. ಸಿಎಂ ಸಿದ್ದರಾಮಯ್ಯ ನಾಯಕತ್ವ ಇರುವ ಹಿನ್ನೆಲೆ ಯಲ್ಲಿ ಕ್ಷೇತ್ರದಲ್ಲಿ ಕುರುಬ, ಮುಸ್ಲಿಂ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೆಳೆಯುವ ನಿರೀಕ್ಷೆ ಇದೆ. ಜತೆಗೆ ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಆದರೆ, ದಲಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೈಸೂರು ರಾಜಮನೆತದ ಕೊಡುಗೆ ಅಪಾರವಾಗಿದೆ. ಹೀಗಾಗಿ ಆ ಸಮುದಾಯಗಳ ಮತಗಳು ಯಾರಿಗೆ ಎಂಬ ಕುತೂಹಲ ಇದೆ.

    ಕೈ ದಾಖಲೆಯ ಗೆಲುವು: 1951ರಿಂದ 17 ಚುನಾವಣೆಗಳನ್ನು ಕಂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ 12 ಬಾರಿ ಗೆಲುವು ಸಾಧಿಸಿದೆ. ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷ ಗೆಲುವು ಸಾಧಿಸಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇದ್ದು, ಬಿಜೆಪಿ 2018ರ ವಿಧಾನಸಭಾ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2023ರಲ್ಲಿ ಸಂಖ್ಯಾಬಲ 1ಕ್ಕೆ ಕುಸಿದಿದೆೆ. 2018ರಲ್ಲಿ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್, 2023ರಲ್ಲಿ ಸಂಖ್ಯಾಬಲವನ್ನು 5 ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ.

    ರಾಜವಂಶಸ್ಥರು ಎಂಬ ಪ್ರೀತಿ, ವಿಶ್ವಾಸ, ನಂಬಿಕೆ ನಮ್ಮ ಜನರಲ್ಲಿರುವುದು ಸಹಜ. ಆದರೆ, ಸಂವಿಧಾನದ ಪ್ರಕಾರ ನಾನೂ ಸಾಮಾನ್ಯ ಪ್ರಜೆ. ಜನರು ಆಶೀರ್ವಾದ ಮಾಡಿದರೆ ಸಾಮಾನ್ಯ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತೇನೆ. ನಮ್ಮ ಪೂರ್ವಜರು ಮೈಸೂರು ಸಂಸ್ಥಾನಕ್ಕೆ ನೀಡಿದ ಹಾಗೂ ಕೇಂದ್ರ ಸರ್ಕಾರದ ಕೊಡುಗೆಗಳು ನನಗೆ ಶ್ರೀರಕ್ಷೆ. ಅವರ ಜನಪರ ಕಾಳಜಿ ಆದರ್ಶವಾಗಿಟ್ಟುಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು.

    | ಯದುವೀರ್ ಒಡೆಯರ್, ಬಿಜೆಪಿ ಅಭ್ಯರ್ಥಿ

    ಜನರ ನಡುವೆ ಇರುವ ವ್ಯಕ್ತಿ ನಾನು. ನನ್ನ ಹೆಸರಿನ ಮುಂದೆ ರಾಜ, ಮಹಾರಾಜ, ಒಡೆಯರ್ ಎಂಬುದು ಇಲ್ಲ. ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ನನ್ನನ್ನು ಮತದಾರರು ಕೈ ಹಿಡಿಯುವ ವಿಶ್ವಾಸವಿದೆ. ಕ್ಷೇತ್ರದಲ್ಲಿ 47 ವರ್ಷಗಳ ನಂತರ ಕಾಂಗ್ರೆಸ್​ನಿಂದ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ದೊರೆತಿದೆ. ಸಮುದಾಯದವರು ಈ ಅವಕಾಶ ಕೈ ಚೆಲ್ಲಬಾರದು.

    | ಎಂ.ಲಕ್ಷ್ಮಣ್ ಕಾಂಗ್ರೆಸ್ ಅಭ್ಯರ್ಥಿ

    ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ: ಶಿವಮೊಗ್ಗದಲ್ಲಿ ಪ್ರಬಲ ಅಭ್ಯರ್ಥಿಗಳ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts