More

    ಮುಂದಿನ ಚುನಾವಣೆಗೆ ಚಾಮರಾಜಪೇಟೆಯಿಂದ ಸಿದ್ದು ಸ್ಪರ್ಧೆ? ಚಾ.ಪೇಟೆಯೇ ಯಾಕೆ?

    ಬೆಂಗಳೂರು: ಇದು ತಮ್ಮ ಕೊನೇ ಚುನಾವಣೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರು. ಆದರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಎಲ್ಲಿಂದ ಕಣಕ್ಕಿಳಿಯಬೇಕು ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದೆ. ಸ್ವತಃ ಅವರೇ ಈ ವಿಚಾರವನ್ನು ಚರ್ಚೆಗೆ ಹರಿಬಿಟ್ಟಿದ್ದಾರೆ.

    ಇನ್ನೊಂದೆಡೆ, ಅವರ ಆಪ್ತರು ಸೇಫ್ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಅನುಯಾಯಿಯಾಗಿ ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಜಿಗಿದ ಜಮೀರ್ ಅಹ್ಮದ್ ಹಾಗೂ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಭೂಮಿಕೆ ಸಿದ್ಧಪಡಿಸಲು ತಯಾರಿ ನಡೆಸಿದ್ದಾರೆ. ನ. 27 ಮತ್ತು ಡಿ. 11ರಂದು ಎರಡು ಸಭೆ ನಡೆಸಿರುವ ಜಮೀರ್ ಮತ್ತು ದೇವರಾಜ್ ಜೋಡಿ, ಚಾಮರಾಜಪೇಟೆ ಭಾಗದ ಪ್ರಮುಖರೊಂದಿಗೂ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರೆ ಅಗತ್ಯ ತಯಾರಿ ಮಾಡುತ್ತೇವೆ ಎಂದು ಜಮೀರ್ ಹೇಳಿಕೊಂಡಿದ್ದಾರೆ.

    2018ರಲ್ಲಿ ಸಿಎಂ ಆಗಿದ್ದುಕೊಂಡು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದಿದ್ದ ಅವರು 36 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಇದೇ ವೇಳೆ ಆಪ್ತರ ಒತ್ತಾಯದ ಮೇರೆಗೆ ಬಾದಾಮಿ ಕ್ಷೇತ್ರದಲ್ಲೂ ಕಣಕ್ಕಿಳಿದು 1,600 ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಭವಿಷ್ಯದ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಯಾವುದು ಸೇಫ್ ಕ್ಷೇತ್ರ ಎಂದು ಆಪ್ತರು ಹುಡುಕಾಟ ನಡೆಸಿದ್ದಾರೆ. ಬಾದಾಮಿಯಲ್ಲಿ ಮುಂದಿನ ಬಾರಿ ಸ್ಪರ್ಧೆ ಸಲೀಸಲ್ಲ ಎಂಬುದು ಸಿದ್ದು ಆಪ್ತರ ಅಭಿಪ್ರಾಯ. ಈ ಕಾರಣಕ್ಕಾಗಿಯೇ ಜಮೀರ್ ಅಹ್ಮದ್​ರ ಬಿಗಿ ಹಿಡಿತದಲ್ಲಿರುವ ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯುವುದು ಸೂಕ್ತ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಜಮೀರ್ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಯಾವ ಕ್ಷೇತ್ರಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಕಾಂಗ್ರೆಸ್​ನಲ್ಲಿದೆ. ಜಮೀರ್ ಶಿವಾಜಿನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸ್ತುತ ರಿಜ್ವಾನ್ ಆರ್ಷದ್ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

    ಹಲವು ಲೆಕ್ಕಾಚಾರ

    • ಜೆಡಿಎಸ್ ತಿರುಗಿ ಬಿದ್ದಿರುವುದರಿಂದ ಚಾಮುಂಡೇಶ್ವರಿ ಮತ್ತು ವರುಣ ಎರಡೂ ಸಹ ಸೇಫ್ ಅಲ್ಲ
    • ಬಾದಾಮಿಯಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದು, ಮುಂದೆ ನೆಚ್ಚಿಕೊಳ್ಳುವಂತಿಲ್ಲ.
    • ಬಿಜೆಪಿ ಮತ್ತು ಜೆಡಿಎಸ್ ಜತೆಗೆ ಕಾಂಗ್ರೆಸ್ ಎದುರಾಳಿ ತಂಡ ಕೂಡ ಒಳಹೊಡೆತ ನೀಡುವುದು ನಿಚ್ಚಳ.

    ಚಾ.ಪೇಟೆಯೇ ಯಾಕೆ?

    ಈ ಕ್ಷೇತ್ರದಲ್ಲಿ 70 ಸಾವಿರಕ್ಕಿಂತ ಹೆಚ್ಚಿನ ಮುಸ್ಲಿಂ ಮತದಾರರಿದ್ದಾರೆ. ಈ ಮತಗಳು ಚದುರದಂತೆ ನೋಡಿಕೊಂಡರೆ ಅಹಿಂದ ಮತಗಳ ಲೆಕ್ಕಾಚಾರದಲ್ಲಿ ಗೆಲುವು ಸುಲಭ ಎಂಬುದು ಜಮೀರ್ ಆಶಯವಾಗಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 33 ಸಾವಿರ ಮತಗಳಿಂದ ಗೆಲುವು ಸಾಧಿಸಿತ್ತು. ಬಿಜೆಪಿ 32 ಸಾವಿರ ಮತ ಮಾತ್ರ ಪಡೆದಿತ್ತು.

    ವಿಪಕ್ಷ ಜತೆ ಸೇರಿ ನಮ್ಮವರೇ ಸೋಲಿಸಿದರು!

    ಮೈಸೂರು: ಜೆಡಿಎಸ್ ಹಾಗೂ ಬಿಜೆಪಿಯವರ ಜತೆಗೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಗ್ರಾಮ ಜನಾಧಿಕಾರ’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ಕೊಟ್ಟಿದೆ. ಅದೇ ರೀತಿ ರಾಜಕೀಯವಾಗಿ ಅತಿಯಾದ ವೇದನೆ ನೀಡಿದ ಕ್ಷೇತ್ರವೂ ಆಗಿದೆ. ಕಳೆದ ಚುನಾವಣೆಯಲ್ಲಿ ನಾನು ಇಷ್ಟೊಂದು ಕೆಟ್ಟದಾಗಿ ಸೋಲು ಅನುಭವಿಸುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್​ನವರೂ ಕಾರಣರಾಗಿದ್ದಾರೆ ಎಂದರು.

    ನನ್ನನ್ನು ಸೋಲಿಸುವುದಕ್ಕೆ ಜೆಡಿಎಸ್ ಮತ್ತು ಬಿಜೆಪಿಯವರು ಒಳಒಪ್ಪಂದ ಮಾಡಿಕೊಂಡರು. ಬಿಜೆಪಿಯಿಂದ ದುರ್ಬಲ ಅಭ್ಯರ್ಥಿ ಹಾಕಲಾಗಿತ್ತು. ಅವನು ಗ್ರಾಮ ಪಂಚಾಯತಿ ಚುನಾವಣೆಯಲ್ಲೇ ಸೋತಿದ್ದ. ಇವರದ್ದು ಎಂತಹ ಒಳಸಂಚು ಇರಬೇಕು ಎಂಬುದನ್ನು ಯೋಚನೆ ಮಾಡಿ. ಅಲ್ಲದೆ, ನಮ್ಮವರಲ್ಲೇ ಕೆಲವರಿಗೆ ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಬೇಕಿರಲಿಲ್ಲ. ಅಂಥವರು ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾಗುವುದನ್ನು ಸಹಿಸದೆ ನನ್ನನ್ನು ಸೋಲುವಂತೆ ಮಾಡಿದರು ಎಂದರು.

    ಅವರೂ ಸೋಲಿಸಿದ್ದರೆ ನನ್ನ ಗತಿ ಏನಾಗುತ್ತಿತ್ತು?

    ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಮತ್ತೆ ಚುನಾವಣೆಗೆ ನಿಲ್ತಿನೋ ಇಲ್ವೋ ಗೊತ್ತಿಲ್ಲ. ಆದರೆ, ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಮರ್ವಘಾತ ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಬಾದಾಮಿಗೆ ಹೋಗಲೇ ಇಲ್ಲ. ಆದರೂ ಅಲ್ಲಿನ ಜನರು ಗೆಲ್ಲಿಸಿ ಆಶೀರ್ವಾದ ನೀಡಿದರು. ಅವರೂ ಸೋಲಿದ್ದರೆ ಪರಿಣಾಮ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts