ಮಸ್ಕಿ: ಯಾರೇ ಆದರೂ ಹಲ್ಲೆ ನಡೆಸುವುದು ಸರಿಯಲ್ಲ. ಯಾವುದೇ ಪಕ್ಷದವರು ಹಲ್ಲೆಯಂತಹ ಕೃತ್ಯ ಎಸಗಿದರೂ ಖಂಡನೀಯ. ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಸಹೋದರ ಸಿದ್ದನಗೌಡ ತುರ್ವಿಹಾಳ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವಿಷಾದ ಇದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದನಗೌಡ ತುರ್ವಿಹಾಳ ಮೇಲೆ ಬುಧವಾರ ಹಲ್ಲೆ ನಡೆದಿರುವುದು ಸರಿಯಾದ ಬೆಳವಣಿಗೆ ಅಲ್ಲ. ನಾನು 12 ವರ್ಷ ಶಾಸಕನಾಗಿದ್ದರೂ ಇಂತಹ ಘಟನೆಗಳು ನಡೆದಿರಲಿಲ್ಲ. ಇತ್ತೀಚಿಗೆ ಇಂತಹ ಘಟನೆಗಳು ನಡೆದಿರುವುದು ಆತಂಕಕಾರಿಯಾಗಿದೆ ಎಂದರು.
ಮಂಗಳವಾರ ಬೂತ್‌ಗಳ ಪರಿಶೀಲನೆಗೆ ತೆರಳಿದ್ದ ನನ್ನ ಕಾರು ಚಾಲಕ ಸೋಮಣ್ಣ, ಮುಖಂಡ ವೆಂಕಣ್ಣ ಸಾಹುಕಾರ ಹಾಗೂ ಆಪ್ತ ಸಹಾಯಕ ವೀರೇಶ ಬಳಿಗಾರ ಮೇಲೆ ಸಿದ್ದನಗೌಡ ತುರ್ವಿಹಾಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾರಂಣಾತಿಕ ಹಲ್ಲೆ ನಡೆಸಿದ್ದಾರೆ. ಸಿದ್ದನಗೌಡ ತುರ್ವಿಹಾಳ ಮತದಾನ ದಿನದಂದು ಹಂಪನಾಳ, ರತ್ನಾಪುರ ಹಟ್ಟಿ ಸೇರಿ ಹಲವೆಡೆ ಪ್ರಭಾವ ಬೀರುವ ಯತ್ನ ನಡೆಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಕೆಲವರು ಹಲ್ಲೆ ನಡೆಸಿದ್ದಾರೆ. ಎಲ್ಲರೂ ಶಾಂತಿ ಕಾಪಾಡಬೇಕು. ಶಾಸಕ ಬಸನಗೌಡ ತುರ್ವಿಹಾಳ ಕೂಡ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಶಾಂತಿ ಕಾಪಾಡಲು ಮನವಿ ಮಾಡಬೇಕೆಂದು ಪ್ರತಾಪಗೌಡ ಪಾಟೀಲ ಹೇಳಿದರು.