More

    ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸಿದ್ಧಗಂಗಾ ಶ್ರೀ

    ದಾವಣಗೆರೆ: ತುಮಕೂರು ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದರಿಂದಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಚಿತ್ರನಟ ಶಂಕರ್ ಅಶ್ವಥ್ ಹೇಳಿದರು.

    ವಿನೋಬನಗರದಲ್ಲಿ ಸಿದ್ಧಗಂಗಾ ಗೆಳೆಯರ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ, ಲಿಂ.ಶ್ರೀ ಶಿವಕುಮಾರ ಸ್ವಾಮೀಜಿಯವರ 4ನೇ ವರ್ಷದ ಸ್ಮರಣೋತ್ಸವ, ದಾಸೋಹ ದಿನ, ವಿಶ್ವಗುರು ಬಸವೇಶ್ವರ ವೃತ್ತ, ಸಿದ್ಧಗಂಗಾ ಶ್ರೀ ಉದ್ಯಾನ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಲವತ್ತರ ದಶಕದಲ್ಲಿ ಬರಗಾಲ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಊಟಕ್ಕೆ ತೊಂದರೆಯಾಗಿದ್ದಾಗ ಸಿದ್ಧಗಂಗಾ ಶ್ರೀಗಳು ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಭಿಕ್ಷೆ ಬೇಡಿ ತಂದು, ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅದಕ್ಕೆ ಅವರನ್ನು ನಾವಿಂದು ನಡೆದಾಡುವ ದೇವರು ಎಂದು ಕರೆಯುತ್ತೇವೆ ಎಂದು ಸ್ಮರಿಸಿದರು. ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ ಎಂದರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್, ಅನೇಕ ಚಿಂತಕರು, ಉಪನ್ಯಾಸಕರ ಬಾಯಲ್ಲಿ ಬರುವ ವಚನಗಳು ಜೀವನದಲ್ಲಿ ಆಚರಣೆಯಲ್ಲಿ ಇರುವುದಿಲ್ಲ. ವಚನಗಳು ಕೇವಲ ಭಾಷಣವಾದರೆ ಪ್ರಯೋಜನವಿಲ್ಲ ಎಂದರು.

    ಕನ್ನಡಿ ಮುಂದೆ ಭೌತಿಕ ಸೌಂದರ್ಯ ಗಮನಿಸುವ ಬದಲಾಗಿ ಮಾನಸಿಕ ಸೌಂದರ್ಯ ವೃದ್ಧಿಸಿಕೊಳ್ಳಬೇಕು. ದಾರ್ಶನಿಕರ, ಶ್ರೇಷ್ಠ ವ್ಯಕ್ತಿಗಳ ಜೀವನ, ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಮತ್ತೊಬ್ಬರನ್ನು ಕೀಳಾಗಿ ನೋಡಬಾರದು ಎಂದು ಕಿವಿಮಾತು ಹೇಳಿದರು.

    ಈಶ್ವರೀಯ ವಿವಿಯ ಸಂಚಾಲಕಿ ಬ್ರಹ್ಮಕುಮಾರಿ ಲೀಲಾ ಮಾತನಾಡಿ, ಅಧ್ಯಾತ್ಮ ಎಂಬುದು ಒಂದು ಶಿಕ್ಷಣ. ಅಧ್ಯಾತ್ಮದ ಜ್ಞಾನ ಒಂದು ಧರ್ಮ, ಜಾತಿಗೆ ಸೀಮಿತವಾದುದಲ್ಲ. ಅದು ಎಲ್ಲ ಜಾತಿ- ಧರ್ಮದ ಸಕಲ ಮಾನವಾತ್ಮರಿಗೆ ಅನ್ವಯಿಸುವ ಅದ್ಭುತವಾದ ಸತ್ಯ ಜ್ಞಾನವಾಗಿದೆ ಎಂದು ಹೇಳಿದರು.

    ಕೆಲವರು ಧರ್ಮಗಳ ಹೆಸರಲ್ಲಿ ಹೊಡೆದಾಡುತ್ತಿದ್ದಾರೆ. ಅಧ್ಯಾತ್ಮದ ನಿಯಮಗಳು ಎಲ್ಲರಿಗೂ ಒಂದೇ. ಅಧ್ಯಾತ್ಮ ಕಲಿಸುವ ಧರ್ಮ ಶಾಂತಿ, ಪ್ರೀತಿ, ಆನಂದ, ಸುಖ, ಪವಿತ್ರತೆ, ಜ್ಞಾನ. ಈ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದೇ ನಿಜವಾದ ಧರ್ಮ ಎಂದರು.

    ಪಾಲಿಕೆ ಸದಸ್ಯ ಎ.ನಾಗರಾಜ್ ಮಾತನಾಡಿ, ವಿನೋಬನಗರದ ಪಾರ್ಕ್‌ಗೆ ಸ್ವಾಮೀಜಿ, ವೃತ್ತಕ್ಕೆ ವಿಶ್ವಗುರು ಬಸವೇಶ್ವರ ವೃತ್ತ ಎಂದು ಹೆಸರಿಡುವ ಬೇಡಿಕೆಗೆ ಅನುಮೋದನೆ ದೊರೆತಿದೆ. ಪಾರ್ಕ್‌ನ ಕಾಂಪೌಂಡ್‌ನ ಗ್ರಿಲ್‌ಗಳ ಪಟ್ಟಿಗಳಿಗೆ ಬಸವಾದಿ ಶರಣರ ವಚನಗಳನ್ನು ಬರೆಸಲಾಗುವುದು ಎಂದು ಹೇಳಿದರು.

    ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಶ್ರೀಗಳು, ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಅಕ್ಕಮಹಾದೇವಿ ಭಜನಾ ಮಂಡಳಿ ಸದಸ್ಯರಿಂದ ವಚನಾಮೃತ ತಂಡದಿಂದ ವಚನ ಗಾಯನ ನಡೆಯಿತು. ಪವರ್ ಮೆಲೋಡಿಸ್ ತಂಡದಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts