More

    ಉತ್ತರ ಕನ್ನಡದ 180 ಜನರಲ್ಲಿ ಈ ರೋಗ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲ ಬುಡಕಟ್ಟು ಜನಾಂಗಗಳ ಜನರಲ್ಲಿ ರಕ್ತ ಸಂಬಂಧಿ ಅನುವಂಶೀಯ ಕಾಯಿಲೆಯೊಂದು ಪತ್ತೆಯಾಗಿದ್ದು, ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
    ಸಿಕಲ್ ಸೆಲ್ ಅನಿಮಿಯಾ ಎಂದು ಕರೆಯುವ ರೊಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸೇರಿ ಇತರ ಕೆಲ ಸಮುದಾಯಗಳ ಸುಮಾರು 17 ಸಾವಿರ ಜನರಲ್ಲಿ ಇರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿ,ಪರಿಶೀಲನೆಗೆ ಸೂಚಿಸಿತ್ತು.

    2020-21 ರಲ್ಲೇ ಜಿಲ್ಲೆಯಲ್ಲಿ ಅಂಕೋಲಾ, ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕುಗಳ 3846 ಜನರ ರಕ್ತದ ಮಾದರಿಗಳನ್ನು ಪಡೆದು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದಾಗ 180 ಜನರಲ್ಲಿ ರೋಗ ಪತ್ತೆಯಾಗಿದೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

    ಈಗ ಡಿಸೆಂಬರ್ ಅಂತ್ಯದವರೆಗೆ ನಡೆಯುವ `ಆಯುಷ್ಮಾನ್‌ಭವ’ ಕಾರ್ಯಕ್ರಮದಲ್ಲಿ ಪ್ರತಿ ಮನೆಗಳಿಗೆ ತೆರಳಿ ಸಿಕಲ್ ಸೆಲ್ ರೋಗ ಪತ್ತೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
    ದೇಶದಲ್ಲಿ 7 ಕೋಟಿ ಜನರಲ್ಲಿ ಈ ರೋಗ ಇರುವ ಅನುಮಾನವನ್ನು ಕೇಂದ್ರ ಆರೋಗ್ಯ ಇಲಾಖೆ ವ್ಯಕ್ತಪಡಿಸಿದ್ದು, ರಾಜ್ಯದ ಚಾಮರಾಜನಗರ, ದಕ್ಷಿಣ ಕನ್ನಡ ಸೇರಿ 7 ಜಿಲ್ಲೆಗಳ ಆಯ್ದ ಜನಾಂಗಗಳಲ್ಲಿ ರೋಗ ಲಕ್ಷಣ ಇರಬಹುದು ಎಂದು ಊಹಿಸಲಾಗಿದೆ.

    ಕುಡಗೋಲು ರೋಗ

    ಅನುವಂಶೀಯವಾಗಿ ಬರುವ ರೋಗ ಇದಾಗಿದ್ದು, ಈ ರೋಗವಿರುವ ರಕ್ತದ ಕಣಗಳನ್ನು ಸೂಕ್ಷ್ಮ ದರ್ಶಕದಲ್ಲಿ ನೋಡಿದಾಗ ಅವುಗಳು ಕುಡಗೋಲಿನ ಆಕಾರವಾಗಿ ಕಾಣುತ್ತವೆ.

    ಇದರಿಂದ `ಕುಡಗೋಲು ಕಾಯಿಲೆ’ ಎಂದು ಕರೆಯಲಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಆಮ್ಲಜನಕ ಸಾಗಿಸುವ ಪ್ರೋಟೀನ್, ಹಿಮೋಗ್ಲೊಬಿನ್‌ನಲ್ಲಿ ಅಸಹಜತೆ ಇರುತ್ತದೆ.

    ಮಗು ಹುಟ್ಟಿ ಐದಾರು ತಿಂಗಳಲ್ಲೇ ಕಾಣಿಸಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ, ಕೈ ಕಾಲುಗಳ ಊತ, ಅನಿಯಮಿತ ರಕ್ತಸ್ರಾವ, ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ಜಿಲ್ಲಾ ಕುಷ್ಠ ರೋಗ ನಿಯಂತ್ರಣ ಅಧಿಕಾರಿ ಡಾ.ಶಂಕರ ರಾವ್ ವಿವರಿಸಿದರು.

    ಇದನ್ನೂ ಓದಿ:ಮುಡಗೇರಿ ಭೂ ಮಾಲೀಕರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ-ಶಾಸಕ ಸೈಲ್‌
    ಇದಕ್ಕೆ ಪ್ರತ್ಯೇಕ ಚಿಕಿತ್ಸಾ ವಿಧಾನವಿದೆ. ಗಂಭೀರವಾಗಿದ್ದರೆ ರಕ್ತವನ್ನು ಬದಲಾಯಿಸುವ ಪರಿಸ್ಥಿತಿ ಬರಬಹುದು. ಇದರಲ್ಲಿ ಎರಡು ವಿಧವಿದೆ. ಸಿಕಲ್ ಸೆಲ್ ಟ್ರಿಪ್ ಎಂಬುದು ಪ್ರಾಥಮಿಕ ಹಂತವಾಗಿದೆ. ಇನ್ನೊಂದನ್ನು ಸಿಕಲ್ ಸೆಲ್ ಡಿಸೀಸ್ ಎಂದು ಕರೆಯಲಾಗುವುದು. ಅದು ಅತ್ಯಂತ ಗಂಭೀರವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಯಾರಿಗೂ ಅಂಥ ಗಂಭೀರ ಸಮಸ್ಯೆ ಕಂಡುಬಂದಿಲ್ಲ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.


    ಸಿಕಲ್ ಸೆಲ್ ರೋಗದ ಬಗ್ಗೆ ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಮನೆಗಳಿಗೇ ತೆರಳಿ ತಪಾಸಣೆ ಮಾಡಲಾಗುತ್ತಿದೆ. ಇಂಥ ರೋಗ ಕಂಡುಬಂದವರಿಗೆ ಅಂಗವಿಕಲ ಕಾರ್ಡ್ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡುವ ಕೇಂದ್ರ ಸರ್ಕಾರದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಶಾರ್ದೂಲ್ ಜಿಲ್ಲೆಯಲ್ಲಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಇಂಥ ಸೌಲಭ್ಯ ಜಿಲ್ಲೆಯ ರೋಗಿಗಳಿಗೂ ಸಿಗುವ ಸಾಧ್ಯತೆ ಇದೆ.
    ಡಾ.ನೀರಜ್
    ಡಿಎಚ್‌ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts