More

    ಹಣ, ಐಶ್ವರ್ಯಕ್ಕಿಂತಲೂ ಜ್ಞಾನ ದೊಡ್ಡ ಸಂಪತ್ತು

    ಪಾಂಡವಪುರ: ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಪ್ರೀತಿ, ಗೌರವ ಮತ್ತು ನೈತಿಕತೆಯ ನೆಲೆಗಟ್ಟಿನಲ್ಲಿ ಸುಭದ್ರ ಸಂಸ್ಕೃತಿಯ ರಾಷ್ಟ್ರವನ್ನು ಕಟ್ಟಬೇಕಾಗಿದೆ ಎಂದು ಶ್ರೀ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ತಾಲೂಕಿನ ದೇವೇಗೌಡನಕೊಪ್ಪಲು ಬಳಿಯ ಕುಂತಿ ಬೆಟ್ಟದ ತಪಲಿನಲ್ಲಿರುವ ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠ ಹಾಗೂ ಕುವೆಂಪು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವ್ಯಕ್ತಿ ಕಟ್ಟಿದ ಸಂಸ್ಥೆಗಿಂತ ಸಾರ್ವಜನಿಕರು ಕಟ್ಟಿ ಬೆಳೆಸಿದ ಸಂಸ್ಥೆಗಳಿಗೆ ಪ್ರಾಮುಖ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ 50 ವರ್ಷಗಳ ಹಿಂದೆ ರೂಪುಗೊಂಡಿರುವ ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠ ಬೆಳೆದು ಬಂದಿರುವುದು ಪ್ರಶಂಸನೀಯವಾಗಿದೆ. ಈ ಸಂಸ್ಥೆ ಕಟ್ಟಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಕಟ್ಟಿರುವ ಇಂತಹ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲಿ ಹಾರೈಸಿದರು.

    ಹಣ, ಐಶ್ವರ್ಯ ಎಲ್ಲದಕ್ಕಿಂತಲೂ ಜ್ಞಾನ ದೊಡ್ಡ ಸಂಪತ್ತು. ಜ್ಞಾನ ಸಂಪಾದನೆಯಿಂದ ಜಗತ್ತಿನ ಎಲ್ಲಿ ಬೇಕಾದರೂ ಗೌರವಯುತವಾಗಿ ಬದುಕಬಹುದಾಗಿದೆ. ಜ್ಞಾನ ಶಾಶ್ವತವೇ ಹೊರತು ಹಣ ಎಂದೂ ಶಾಶ್ವತವಾಗಿ ಉಳಿಯುವುದಿಲ್ಲ. ವಿಶ್ವದ ಅನೇಕ ಮಹನೀಯರು ತಮ್ಮ ಜ್ಞಾನದಿಂದಲೇ ಲೋಕವಿಖ್ಯಾತರಾಗಿದ್ದಾರೆ. ಓದಿನಿಂದ ಜ್ಞಾನ ಪಡೆದುಕೊಳ್ಳುವುದು ಕೂಡ ತಪಸ್ಸು ಇದ್ದಂತೆ. ಶಿಕ್ಷಣ ಜತೆಗೆ ಲೌಕಿಕ ಜ್ಞಾನವು ಬಹಳ ಮುಖ್ಯ ಎಂದರು.

    ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಆಧುನಿಕತೆ ಬೆಳೆದಂತೆ ಶಿಕ್ಷಣದಲ್ಲೂ ಬದಲಾವಣೆಯ ಕ್ರಾಂತಿ ಆಗಬೇಕಿದೆ. ಸರ್ಕಾರಗಳು ಶಿಕ್ಷಣದ ವಿಚಾರದಲ್ಲಿ ಮಾಡಲಾಗದ ಅನೇಕ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದು ತಿಳಿಸಿದರು.

    ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮಠ-ಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ಕ್ರಾಂತಿ ಮಾಡಿವೆ. ಈ ನಿಟ್ಟಿನಲ್ಲಿ ಸಿದ್ಧಗಂಗಾ ಮಠ, ಸುತ್ತೂರು ಮಠಗಳು ಮಹತ್ತರ ಜವಾಬ್ದಾರಿ ನಿರ್ವಹಿಸಿವೆ ಎಂದರು.

    ಸುವರ್ಣ ಮಹೋತ್ಸವ ಅಂಗವಾಗಿ ಸಾಹಿತಿ ಚಿಕ್ಕಮರಳಿ ಬೋರೇಗೌಡ ಅವರ ಮಾರ್ಗದರ್ಶನದಲ್ಲಿ ಹೊರತರಲಾಗಿರುವ ಶ್ರೀ ಶಂಕರ ಸುವರ್ಣ ನೆನಪಿನ ಸಂಪುಟವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ವಿದ್ಯಾಪೀಠದ ಸಂಸ್ಥಾಪಕ ದಿ.ಸಿ.ಮರೀಗೌಡರ ಪ್ರತಿಮೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅನಾವರಣಗೊಳಿಸಿದರು. ಸಂಸ್ಥೆಯ ಮಹಾದ್ವಾರವನ್ನು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.

    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪತ್ರಕರ್ತ ವಿ.ಎನ್.ಗೌಡ, ನೈಸರ್ಗಿಕ ಕೃಷಿಕ ಸಿ.ಚೆಲುವರಾಜು, ಸ್ಕೇಟಿಂಗ್ ಕ್ರೀಡಾಪಟು ಚಿನ್ಮಯಿ, ಜನಪದ ಕಲಾವಿದ ಹೆಗ್ಗಡಹಳ್ಳಿ ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ, ಉಪಾಧ್ಯಕ್ಷ ಡಿ.ಕೆ.ದೇವೇಗೌಡ, ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ, ಡಾ.ಮಣಿಕರ್ಣಿಕಾ, ಡಾ.ಮಾಯೀಗೌಡ, ಮನ್‌ಮುಲ್ ಮಾಜಿ ನಿರ್ದೇಶಕ ಎಲ್.ಸಿ.ಮಂಜುನಾಥ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಬಾಲಗಂಗಾಧರ್, ಎಸ್.ಎ.ಮಲ್ಲೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts