More

    ಆಸ್ಪತ್ರೆ ಮೇಲ್ದರ್ಜೆಗೇರಿದರೂ ವೈದ್ಯರಿಲ್ಲ

    ಆರ್.ಬಿ. ಜಗದೀಶ್ ಕಾರ್ಕಳ

    ಪ್ರಗತಿ ಹೊಂದುತ್ತಿರುವ ಅಜೆಕಾರು ಹೋಬಳಿಯು ಗ್ರಾಮೀಣ ಮಟ್ಟದಾಗಿದ್ದು, ಜನ ಕೃಷಿಯೊಂದಿಗೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಅದಕ್ಕೆ ಪೂರಕವಾಗಿ ಅಗತ್ಯವಾಗಿರಬೇಕಾದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ವೈದ್ಯರು ಇಲ್ಲದಿರುವುದು ಹಿನ್ನಡೆಯಾಗಿದೆ.

    1990ರಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವಾಗಿ ಈ ಆಸ್ಪತ್ರೆ ಆರಂಭಗೊಂಡಿತು. 2000ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯವಾಗಿ ಮೇಲ್ದರ್ಜೆಗೇರಿತು. ಈ ಸಂದರ್ಭ ಪಶು ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ವರ್ಗಾವಣೆಗೊಂಡ ನಂತರ ಪೂರ್ಣಕಾಲಿಕ ವೈದ್ಯರ ನೇಮಕಾತಿಯಾಗಿಲ್ಲ. ಆದರೆ 2012ನೇ ಇಸವಿಯಲ್ಲಿ ಹೋಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆ ಆಗಿ ಮೇಲ್ದರ್ಜೆಗೇರಿದ್ದು, ಆದರೂ ಅಧಿಕಾರಿಗಳ ನೇಮಕ ಮಾತ್ರ ಈವರೆಗೆ ಆಗಿಲ್ಲ. ಪ್ರಭಾರ ವೈದ್ಯಾಧಿಕಾರಿಯೇ ಕೆಲದಿನಗಳಿಗೆ ಮಾತ್ರ ಕಾರ‌್ಯನಿರ್ವಹಿಸುತ್ತಾರೆ.

    ಚಿಕಿತ್ಸೆ ಸಿಗದೆ ಪ್ರಾಣಿಗಳ ಸಾವು: ಅಜೆಕಾರು ಹೋಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆ ವ್ಯಾಪ್ತಿಯಲ್ಲಿ ಮರ್ಣೆ, ಕಡ್ತಲ, ಶಿರ್ಲಾಲು, ಕೆರ್ವಾಶೆ ಗ್ರಾಪಂ ಇದ್ದು 8 ಕಂದಾಯ ಗ್ರಾಮಗಳನ್ನು ಒಳಗೊಂಡಿದೆ. ಸುಮಾರು 9,500 ಸಾಕುಪ್ರಾಣಿಗಳಿದ್ದು 9 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಈ ಭಾಗದ ಜನತೆ ತಮ್ಮ ರಾಸುಗಳು ಸೇರಿದಂತೆ ಸಾಕುಪ್ರಾಣಿಗಳಿಗೆ ಆರೋಗ್ಯ ಸಮಸ್ಯೆಯಾದಾಗ ತುರ್ತು ಚಿಕಿತ್ಸೆ ಸಿಗದೆ ಪ್ರಾಣಿಗಳು ಸಾವನಪ್ಪಿದ ಹಲವು ಪ್ರಕರಣಗಳಿವೆ.

    ಕಾರ್ಯಕ್ಷೇತ್ರ ಮೀರಿ ಕರ್ತವ್ಯ ನಿರ್ವಹಣೆ: ಕಾರ್ಕಳ ತಾಲೂಕಿನಲ್ಲಿ ಸುಮಾರು 54 ಸಾವಿರ ಜಾನುವಾರುಗಳಿವೆ. ಒಂದು ವೈದ್ಯರಿಗೆ ಸುಮಾರು 4- 5 ಪಂಚಾಯಿತಿ ವ್ಯಾಪ್ತಿ ಇರುವುದರಿಂದ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರಕುವುದು ಕಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರರು ಹೆಚ್ಚಾಗುತ್ತಿರುವುದರಿಂದ ಪಶು ವೈದ್ಯರ ನೇಮಕ ಶೀಘ್ರವಾಗಿ ನಡೆಯಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಖಾಲಿ ಇರುವ ಹುದ್ದೆಗಳು: ಡಿ ದರ್ಜೆ ನೌಕರ 2 ಹುದ್ದೆಗಳಿದ್ದು ಇದರಲ್ಲಿ ಓರ್ವ ಮಾತ್ರ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಅಜೆಕಾರು ಹೋಬಳಿ ಮಟ್ಟದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ-1, ಜಾನುವಾರು ಅಧಿಕಾರಿ -1 ಸೇರಿದಂತೆ ಎಲ್ಲ ಹುದ್ದೆಗಳು ಖಾಲಿಯಾಗಿ ಉಳಿದಿವೆ.

    ಹೆಚ್ಚಿನೆಡೆ ಸಿಬ್ಬಂದಿ ಕೊರತೆ: ಅಜೆಕಾರು ಮಾತ್ರ ಸೀಮಿತವಾಗದೆ ಕಾರ್ಕಳ ತಾಲೂಕಿನ ಬಜಗೋಳಿ, ನಿಟ್ಟೆ, ಪಳ್ಳಿ, ಕಲ್ಯಾ, ಬೈಲೂರು, ಬೋಳ, ಬೆಳ್ಮಣ್, ಸಾಣೂರು, ಇರ್ವತ್ತೂರು, ಹೊಸ್ಮಾರ್, ಮಾಳ, ನಕ್ರೆ, ಮುಂಡ್ಕೂರು ಪಶು ಚಿಕಿತ್ಸಾ ಕೇಂದ್ರಗಳಲ್ಲಿಯೂ ಸಿಬ್ಬಂದಿ ಕೊರತೆ ಇದೆ. ಹೆಬ್ರಿ ತಾಲೂಕಿನ ಮುನಿಯಾಲು, ಶಿವಪುರ, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು ಕೇಂದ್ರಗಳಲ್ಲಿಯೂ ಸಿಬ್ಬಂದಿ ಕೊರತೆ ಇದೆ. ತಾಲೂಕು ಪಶು ಆಸ್ಪತ್ರೆ ಸಹಿತ ಗ್ರಾಮೀಣ ಭಾಗದ ಪ್ರಾಥಮಿಕ ಪಶು ಆಸ್ಪತ್ರೆಗಳಲ್ಲಿ ಒಟ್ಟು 57 ಹುದ್ದೆಗಳಿದ್ದು ಇದರಲ್ಲಿ ಕೇವಲ 12 ಹುದ್ದೆಗಳಲ್ಲಿ ಮಾತ್ರ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 45 ಹುದ್ದೆಗಳು ಕಾರ್ಕಳ ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಖಾಲಿಯಾಗಿ ಉಳಿದಿದೆ.

    ಪಶುಗಳನ್ನೇ ನಂಬಿಕೊಂಡಿರುವ ಹೈನುಗಾರರು ತಾಲೂಕು ವ್ಯಾಪ್ತಿಯಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ. ಪಶುಗಳ ಆರೋಗ್ಯದಲ್ಲಿ ವ್ಯತಿರಿಕ್ತವಾದಾಗ ಅಗತ್ಯ ಚಿಕಿತ್ಸೆ ಪಡೆಯಲು ಪಶು ವೈದ್ಯರೇ ಆಸ್ಪತ್ರೆಯಲ್ಲಿ ಇರುವುದಿಲ್ಲ. ಇದರಿಂದ ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ. ಪೂರ್ಣ ಕಾಲಿಕ ವೈದ್ಯರ ಸಹಿತ, ಸಿಬ್ಬಂದಿ ನೇಮಕಾತಿಯು ತ್ವರಿತವಾಗಿ ನಡೆಯಬೇಕಾಗಿದೆ.
    – ಕಮಲಾಕ್ಷ ನಾಯಕ್
    ಹೈನುಗಾರ, ಶಿರ್ಲಾಲು

    ಕಾರ್ಕಳ ತಾಲೂಕು ವ್ಯಾಪ್ತಿಯ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಶೇ.80 ಹುದ್ದೆಗಳು ಖಾಲಿ ಬಿದ್ದಿವೆ. 9 ಮಂದಿ ವೈದ್ಯರ ಪೈಕಿ ಮೂವರು ಮಾತ್ರ ಇದ್ದು ಇಡೀ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಅವರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿದವರು ಸಂಕಷ್ಟ ಅನುಭವಿಸುತ್ತಿರುವುದಂತೂ ಸತ್ಯ. ನಿಗದಿತ ವೇಳೆಯಲ್ಲಿ ನಿಗದಿತ ಸ್ಥಳಕ್ಕೆ ತಲುಪಲು ವೈದ್ಯರಿಗೆ ಸಾಧ್ಯವಾಗುತ್ತಿಲ್ಲ. ತಾಲೂಕಿನ 7 ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಸಂಖ್ಯೆ ಶೂನ್ಯ ಎಂಬುವುದು ಗಮನಾರ್ಹವಾಗಿದೆ. ಸಂಬಂಧಪಟ್ಟವರ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ.
    – ಡಾ. ರಾಜಶೇಖರ್
    ತಾಲೂಕು ಪಶುವೈದ್ಯಾಧಿಕಾರಿ, ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts