More

    ತಿನ್ನಲೂ ಸಿಗಲ್ಲ, ಲೋಟ ನೀರನ್ನೂ ಕೊಡಲ್ಲ. ನಾವು ಸೇವೆ ಮಾಡುತ್ತಿರುವುದೇ ತಪ್ಪೆ? ಆಂಬ್ಯುಲೆನ್ಸ್ ಸಿಬ್ಬಂದಿ ಬಿಚ್ಚಿಟ್ಟಿದ್ದಾರೆ ಕರಾಳ ಮುಖ

    ಕೊಚ್ಚಿ (ಕೇರಳ): ಕರೊನಾ ಕಾಟ ಶುರುವಾದಾಗಿನಿಂದ ಒಮ್ಮೆಯೂ ರಜೆ ಇಲ್ಲ, ದಿನದ 18 ಗಂಟೆ ಕೆಲಸ, ಎದ್ದರೆ, ಕೂತರೆ, ಅಕ್ಕ-ಪಕ್ಕ ಎಲ್ಲೆಡೆಯೂ ಶಂಕಿತರು, ಸೋಂಕಿತರು, ಮನೆಯಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಮನೆಗೆ ಸೋಂಕಿತರ ಸಾಗಾಟ, ಮನೆ, ಹೆಂಡತಿ, ಮಕ್ಕಳು ಎಲ್ಲರಿಂದಲೂ ದೂರವಾಗಿ, ಹಗಲು ರಾತ್ರಿಯೆನ್ನದೇ ದುಡಿದರೂ ಒಂದು ಲೋಟ ನೀರು ಇವರಿಗೆ ನೀರು ಸಿಗಲ್ಲ, ಹಸಿವೆಯಾದರೆ ಯಾರೂ ಆಹಾರ ಕೊಡಲ್ಲ…!

    ಇದು ಕೇರಳಲ್ಲಿ 108 ಉಚಿತ ಆಂಬ್ಯುಲೆನ್ಸ್ ಸಿಬ್ಬಂದಿಯ ದಿನನಿತ್ಯದ ಗೋಳಾಗಿದೆ. ಕರೊನಾ ಶುರುವಾದಾಗಿನಿಂದ ನಿರಂತರ ಸೋಂಕಿತರನ್ನು ಸಾಗಿಸಲು ಕೆಲಸದಲ್ಲಿಯೇ ತೊಡಗಿರುವ ಈ ಸಿಬ್ಬಂದಿಯನ್ನು ಸೋಂಕಿನ ಭಯದಿಂದ ಯಾರೂ ಹತ್ತಿರ ಸೇರಿಸದ ವಾತಾವರಣ ಸೃಷ್ಟಿಯಾಗಿದೆ.

    ಮಾರ್ಗ ಮಧ್ಯೆ ಹಸಿವಾದಾಗ ಅಂಗಡಿಗೆ ಹೋದರೆ ‘ಹತ್ತಿರ ಬರಬೇಡಿ, ದಯವಿಟ್ಟು ದೂರ ಹೋಗಿ’ ಎನ್ನುತ್ತಾರೆ. ಅಲ್ಲೇ ಪಕ್ಕದಲ್ಲಿಯೇ ಬಿಸಿಬಿಸಿ ಟೀ- ಕಾಫಿ ಇದ್ದರೂ ‘ನಿಮಗೆ ಕೊಡಲು ಆಗುವುದಿಲ್ಲ. ನೀವು ಕುಡಿಯುವುದನ್ನು ನೋಡಿದರೆ, ಬೇರೆ ಯಾರೂ ಇಲ್ಲಿ ಬರುವುದಿಲ್ಲ’ ಎನ್ನುತ್ತಾರೆ. ನಾವೇನು ತಪ್ಪು ಮಾಡಿದ್ದೇವೆ. ಸೋಂಕಿತರನ್ನು ಸಾಗಿಸುವ ಕೆಲಸ ಮಾಡುತ್ತಿರುವುದೇ ನಮ್ಮ ತಪ್ಪೆ?’ ಎಂದು ಆಂಬ್ಯುಲೆನ್ಸ್ ಚಾಲಕನೊಬ್ಬ ಕೇಳುತ್ತಾನೆ.

    ‘ಸೋಂಕಿನ ಭಯದಿಂದ ಮನೆಗೆ ಹೋಗುವುದಿಲ್ಲ. ಹೆಂಡತಿ, ಮಕ್ಕಳು, ಮನೆ ಎಲ್ಲವನ್ನೂ ದೂರ ಮಾಡಿಕೊಂಡು ಇಲ್ಲಿ ಸೇವೆಯಲ್ಲಿ ತೊಡಗಿಕೊಂಡರೆ, ಹೀಗೆ ನಮ್ಮನ್ನು ಅಸ್ಪ್ರಷ್ಯರ ಥರ ನೋಡಿದರೆ ಹೇಗಾಗಬೇಡ?’ ಎಂದು ಆಂಬ್ಯುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞನೊಬ್ಬ ನೋವು ತೋಡಿಕೊಳ್ಳುತ್ತಾನೆ.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇರಳದಲ್ಲಿ 108 ಉಚಿತ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಲಾಗಿದೆ. ಮೊಬೈಲ್ ಫೋನ್ ಆ್ಯಪ್ ಮೂಲಕ ಸಹಾಯಕ್ಕಾಗಿ ಕರೆ ಮಾಡಿದರೆ ಸಿಬ್ಬಂದಿ ಸ್ಥಳಕ್ಕೆ ಹೋಗಬೇಕು. ಅಂಬ್ಯುಲೆನ್ಸ್‌ನಲ್ಲಿ ಸಾಮಾನ್ಯವಾಗಿ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ) ಇರುತ್ತಾರೆ.

    ಕೇರಳದಲ್ಲಿ ಮೊದಲ ಸೋಂಕು ಪತ್ತೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಅನೇಕ ಆಂಬ್ಯುಲೆನ್ಸ್ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕ್ವಾರಂಟೈನ್‌ಗೆ ಒಳಗಾದವರನ್ನು ಇದೇ ಸಿಬ್ಬಂದಿ ಕರೆದುಕೊಂಡು ಬಂದು ವಿವಿಧೆಡೆ ದಾಖಲು ಮಾಡಿದ್ದಾರೆ. ಅಲ್ಲಿ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಳ್ಳದೇ ಇದ್ದಾಗ ಅವರನ್ನು ಅವರ ಮನೆಗೆ ತಲುಪಿಸಿಬರುವ ಕೆಲಸವನ್ನೂ ಮಾಡಿದ್ದಾರೆ. ಇಷ್ಟೊಂದು ಕೆಲಸ ಮಾಡುವಾಗ ನಾವು ಸೋಂಕು ತಗುಲದಂತೆ ಎಲ್ಲ ರೀತಿಯ ಎಚ್ಚರಿಯಕೆಯನ್ನು ವಹಿಸಿದರೂ ಜನರು ಈ ರೀತಿ ವರ್ತಿಸುತ್ತಿರುವುದು ತುಂಬಾ ಬೇಸರ ತಂದಿದೆ ಎನ್ನುತ್ತಾರೆ ಸಿಬ್ಬಂದಿ.

    ‌‘ಕರೊನಾ ಡ್ಯೂಟಿಯ ನಂತರ ಎಷ್ಟು ಸೋಂಕಿತರನ್ನು ಈ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದೇನೋ ನನಗೆ ಗೊತ್ತಿಲ್ಲ. ಕೋವಿಡ್‌ ಹಾಟ್‌ಸ್ಪಾಟ್‌ ಎಂದು ಗುರುತಿಸಿದ ಪ್ರದೇಶಗಳಲ್ಲಿ ನಮ್ಮ ಸೇವೆ ಅಗತ್ಯವಾಗಿ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಸೋಂಕಿತರು ಅಥವಾ ಶಂಕಿತರ ಸೇವೆಯಲ್ಲಿಯೂ ನಾವು ತೊಡಗಿಸಿಕೊಳ್ಳಬೇಕಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸೋಂಕಿತರ ಸ್ಥಿತಿ ಗಂಭೀರವಾಗಿದ್ದಾಗ ನಾವು ಅತ್ಯಂತ ದೀರ್ಘ ಪ್ರಯಾಣದಲ್ಲಿ ನಮ್ಮ ಹಸಿವು, ಬಾಯಾರಿಕೆ, ಪ್ರಕೃತಿಯ ಕರೆ ಎಲ್ಲವನ್ನೂ ಬದಿಗೊತ್ತಬೇಕಾಗುತ್ತದೆ. ಆದ್ದರಿಂದ ನಮ್ಮನ್ನೂ ಮನುಷ್ಯರನ್ನಾಗಿ ನೋಡುವ ಅಗತ್ಯವಿದೆ ಎನ್ನುತ್ತಾರೆ ಈ ಸಿಬ್ಬಂದಿ.

    ಕರೊನಾ ಸಂದರ್ಭದಲ್ಲಿ ಹಲವು ಆಂಬ್ಯುಲೆನ್ಸ್ ಸಿಬ್ಬಂದಿ ನಿಗದಿತ ವೇಳೆಯನ್ನು ಮೀರಿ ಕೆಲಸ ಮಾಡಿದ್ದಾರೆ. ಆದರೆ ತಮಗೆ ಹೆಚ್ಚು ಅವಧಿಯ ಕೆಲಸದ ಬಗ್ಗೆ ಹೆಚ್ಚಿನ ಹಣ ಸಿಗುವ ಯಾವುದೇ ಭರವಸೆ ಇಲ್ಲ. ದೂರ ಪ್ರಯಾಣ ಮಾಡಿದಾಗ ಪ್ರವಾಸ ಭತ್ಯೆಯೂ ನಮಗೆ ಸಿಗುವುದಿಲ್ಲ. ಅಧಿಕ ಪ್ರಯಾಣದಿಂದ ನಮಗೆ ಸುಸ್ತಾಗಿದೆ ಎಂದು ಹೇಳುವಂತೆಯೂ ಇಲ್ಲ. ಕೆಲವು ಸಿಬ್ಬಂದಿಯನ್ನು ಕರೊನಾ ಸೇವೆಗಾಗಿಯೇ ನಿಯೋಜನೆ ಮಾಡಲಾಗಿದೆ. ಅವರನ್ನು ಕಾಯಂ ಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಎಲ್ಲಾ ಸೌಲಭ್ಯಗಳ ಬಗ್ಗೆ ಹಾಗೂ ನಮ್ಮ ಸಂಬಳದ ಬಗ್ಗೆ ನಾವು ಅಧಿಕಾರಿಗಳನ್ನು ಕೇಳಿದಾಗ ಬರುವ ಉತ್ತರ, ‘ನಮ್ಮನ್ನು ಏನು ಕೇಳಬೇಡಿ, ಸದ್ಯ ನೀವೆಲ್ಲಾ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದೀರಿ’ ಎಂಬುದು. ಪರಿಸ್ಥಿತಿ ಹೀಗಿರುವಾಗ ಇನ್ನೊಂದೆಡೆ ಸಾರ್ವಜನಿಕರಿಂದಲೂ ನಿಂದನೆಗೆ ಒಳಗಾಗಬೇಕಾಗಿ ಬಂದಿದೆ ಎಂದು ಅವರು ನೊಂದು ನುಡಿಯುತ್ತಿದ್ದಾರೆ.

    ಹೀಗೆ ಸೇವೆ ಸಲ್ಲಿಸಿರುವ ತಮ್ಮನ್ನು ಮನುಷ್ಯರಂತೆ ಕಾಣಬೇಕು ಹಾಗೂ ಸರ್ಕಾರ ಕೂಡ ತಮ್ಮತ್ತ ಗಮನ ಹರಿಸಬೇಕು ಎನ್ನುವುದು ಇವರ ಮನವಿ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts