More

    ಸಂಕಷ್ಟದಲ್ಲಿವೆ ಶಾಪಿಂಗ್ ಮಾಲ್​ಗಳು; ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು

    ಶಿವಾನಂದ ತಗಡೂರು

    ಬೆಂಗಳೂರು: ರಾಜಧಾನಿಯಲ್ಲಿ ಎಲ್ಲ ವರ್ಗದವರಿಗೆ ಆಕರ್ಷಣೆಯ ಕೇಂದ್ರಗಳಾಗಿ ರೂಪುಗೊಂಡಿದ್ದ ಮಾಲ್​ಗಳ ಕಾರುಬಾರಿಗೆ ಬ್ರೇಕ್ ಬಿದ್ದು ಎರಡು ತಿಂಗಳು ಕಳೆದಿದ್ದು, 10 ಸಾವಿರಕ್ಕೂ ಹೆಚ್ಚು ಜನರ ಉದ್ಯೋಗಕ್ಕೆ ಕುತ್ತು ಬಂದಿದೆ. ಬೆಂಗಳೂರಿನಲ್ಲಿ ಬೃಹತ್ 26 ಮಾಲ್​ಗಳು ಸೇರಿ, ರಾಜ್ಯದಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ 286ಕ್ಕೂ ಹೆಚ್ಚು ಮಾಲ್​ಗಳಿವೆ. ಲಾಕ್​ಡೌನ್ ಬಳಿಕ, ಉದ್ಯೋಗಿಗಳು ಮೊದಲ ತಿಂಗಳ ಸಂಬಳ ಕಂಡರೂ, 2ನೇ ತಿಂಗಳ ಹೊತ್ತಿಗೆ ಕಣ್ಣು ಬಾಯಿಬಿಡುತ್ತಿದ್ದಾರೆ. ಶೋರೂಂಗಳ ಮಾಲೀಕರಿಗೆ ಮಾತ್ರವಲ್ಲ, ನೂರಾರು ಕೋಟಿ ರೂ. ಸುರಿದು ಮಾಲ್​ಗಳನ್ನು ಕಟ್ಟಿಸಿದವರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಇನ್ನು ಪರೋಕ್ಷ ವಾಗಿ ಉದ್ಯೋಗ ಅವಲಂಬಿಸಿದವರ ಸ್ಥಿತಿಯನ್ನಂತೂ ಕೇಳುವವರೇ ಇಲ್ಲ.

    ಕೊಟ್ಯಂತರ ರೂ. ಬಂಡವಾಳ ಹಾಕಿ ಮಾಲ್​ಗಳನ್ನು ಕಟ್ಟಿದ ಬಹುಪಾಲು ಎಲ್ಲರೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರಾಜ್ಯದ ಮಾಲ್​ಗಳಲ್ಲಿನ ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು ಬಂದಿದೆ. ಶೋರೂಂಗಳಲ್ಲಿ ವ್ಯಾಪಾರವಿಲ್ಲ, ನಮಗೆ ಬಾಡಿಗೆ ಬರುತ್ತಿಲ್ಲ. ಸರ್ಕಾರ ಇನ್ನುಮುಂದಾದರೂ ಮಾಲ್​ಗಳ ಸಮಸ್ಯೆಯತ್ತ ಗಮನಹರಿಸಬೇಕು.
    | ಉದಯ ಗರುಡಾಚಾರ್
    ಶಾಸಕ, ಗರುಡ ಮಾಲ್ ಮಾಲೀಕ

    5 ಸಾವಿರ ಕೋಟಿ ರೂ. ನಷ್ಟ: ರಾಜ್ಯದಲ್ಲಿನ ಮಾಲ್​ಗಳ ಪೈಕಿ ಶೇ.50ಕ್ಕೂ ಹೆಚ್ಚು ವಹಿವಾಟು ಬೆಂಗಳೂರಿನಲ್ಲಿ ನಡೆದರೆ, ಇನ್ನುಳಿದದ್ದು ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂಬ ಅಂದಾಜಿದೆ. ಎಲ್ಲ ಮಾಲ್​ಗಳಿಂದ ಪ್ರತಿ ತಿಂಗಳು 2 ಸಾವಿರ ಕೋಟಿ ರೂ. ವಹಿವಾಟು ನಡೆದರೆ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ವಹಿವಾಟು 3 ಸಾವಿರ ಕೋಟಿ ರೂ.ಗಳಿಗೆ ಹಿಗ್ಗುತ್ತಿತ್ತು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿಹೆಚ್ಚು ವ್ಯಾಪಾರ ವಹಿವಾಟು ನಡೆಯುವುದು ವಾಡಿಕೆ. ಆದರೆ, ಅದೀಗ ಎಲ್ಲವೂ ಶೂನ್ಯದಲ್ಲಿ ನಿಂತಿದ್ದು, ಕಳೆದೆರಡು ತಿಂಗಳಲ್ಲಿ ರಾಜ್ಯದಲ್ಲಿ ಮಾಲ್​ಗಳು 5 ಸಾವಿರ ಕೋಟಿ ರೂ. ನಷ್ಟ ಅನುಭವಿಸಿವೆ.

    ಮಾಲ್ ಮಾಲೀಕರ ಗೋಳು: ಮಾಲ್​ಗಳಲ್ಲಿ ಅಂಗಡಿ ಮುಂಗಟ್ಟು ಇಟ್ಟುಕೊಂಡವರಿಗೆ ನಯಾಪೈಸೆ ವಹಿವಾಟು ನಡೆದಿಲ್ಲ. ಹಾಗಾಗಿ ಬಾಡಿಗೆ ಕೊಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇತ್ತ ಮಾಲ್​ಗಳ ಮಾಲೀಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲಾಗದೆ ಮೌನಕ್ಕೆ ಶರಣಾಗಿದ್ದಾರೆ. ನೂರಾರು ಕೋಟಿ ರೂ. ಬಂಡವಾಳ ಹಾಕಿರುವ ಅವರು, ಪ್ರತಿ ತಿಂಗಳ ಬ್ಯಾಂಕ್ ಇಎಂಐ ಲಕ್ಷ ರೂ.ಗಳ ಲೆಕ್ಕದಲ್ಲಿಯೇ ಕಟ್ಟಬೇಕಿದೆ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು ಎಂದು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

    ಕರೊನಾ ಲಾಕ್​ಡೌನ್ ಘೋಷಣೆಗೂ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಸರ್ಕಾರದ ಆದೇಶ ಪ್ರಕಾರ 26 ಮಾಲ್​ಗಳನ್ನು ಬಂದ್ ಮಾಡಿಸಲಾಗಿದೆ.
    | ಬಿ.ಎಚ್. ಅನಿಲ್​ಕುಮಾರ್ ಬಿಬಿಎಂಪಿ ಆಯುಕ್ತ

    ಸೆಕ್ಯೂರಿಟಿ ಗಾರ್ಡ್​ಗಳು, ಸಹಾಯಕರು, ರ್ಪಾಂಗ್ ನಿರ್ವಹಿಸುವವರು, ಶೋರೂಂಗಳಲ್ಲಿ ಕೆಲಸ ಮಾಡುವವರು, ಮಲ್ಟಿಪ್ಲೆಕ್ಸ್​ಗಳಲ್ಲಿ ಕಾರ್ಯ ನಿರ್ವಹಿಸುವವರು, ಇಂಜಿನಿಯರ್​ಗಳು, ಟೆಕ್ನಿಷಿಯನ್ಸ್​ಗಳಿಂದ ಹಿಡಿದು ಶೌಚಗೃಹಗಳನ್ನು ಕ್ಲೀನ್ ಮಾಡುವವರ ತನಕ ಹಲವು ರೀತಿಯಲ್ಲಿ ಉದ್ಯೋಗಗಳನ್ನು ಅವಲಂಬಿಸಿದವರು ಮಾಲ್​ಗಳಲ್ಲಿದ್ದಾರೆ. ಇವರೆಲ್ಲರ ಬದುಕಿಗೆ ಎರಗಿ ಆರ್ಥಿಕ ಸಂಕಷ್ಟಕ್ಕೂ ಸರ್ಕಾರ ಕಿವಿಗೊಡಬೇಕಿದೆ.

    ಮತ್ತೆ ಆರಂಭಕ್ಕೆ ಅವಕಾಶ ನೀಡಲಿ: ರಾಜ್ಯ ಸರ್ಕಾರ ಲಾಕ್​ಡೌನ್ ಸಡಿಲಿಕೆ ಮಾಡಿದ್ದರೂ ಮಾಲ್​ಗಳಿಗೆ ಅನ್ವಯಿಸಿಲ್ಲ. ಷರತ್ತು ವಿಧಿಸಿ, ನಿಯಮಾವಳಿ ರೂಪಿಸಿ ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟರೂ ಸಾಕು. ಹೇಗೋ ಜೀವನ ನಡೆಯುತ್ತದೆ ಎನ್ನುವುದು ಮಾಲ್​ಗಳಲ್ಲಿ ಅಂಗಡಿ ಇಟ್ಟುಕೊಂಡವರ ಅಹವಾಲು. ಈ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಲಿ ಎನ್ನುವುದು ಮಾಲ್ ಮಾಲೀಕರ ಆಗ್ರಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts