More

    ಈ ಮಹಿಳೆಯ ಚಪ್ಪಲಿ ಸೈಜ್ ವರ್ಷ ವರ್ಷ ಹೆಚ್ಚಾಗುತ್ತಿತ್ತು! ಅದರ ಹಿಂದಿತ್ತು ಭಯಾನಕ ಸತ್ಯ..!

    ಹೈದರಾಬಾದ್: ನಾವು ಸಣ್ಣವರಿರುವಾಗ ನಮ್ಮ ಚಪ್ಪಲಿ ಗಾತ್ರ ಎಷ್ಟು ಹೆಚ್ಚಾಗುತ್ತಿದೆ ಎಂದು ನೋಡಿಕೊಂಡು ಸಂತೋಷಪಡುತ್ತಿದ್ದ ದಿನಗಳು ಇದ್ದವು. ಆದರೆ ಒಂದು ಪ್ರಾಯ ಕಳೆದ ಮೇಲೆ ಕಾಲಿನ ಗಾತ್ರ ಬೆಳೆಯಲ್ಲ. ಇಲ್ಲೊಬ್ಬ ಮಹಿಳೆಗೆ ಮಾತ್ರ ಸುಮಾರು ಎರಡು ವರ್ಷಗಳಿಂದ ಚಪ್ಪಲಿ ಸೈಜ್ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿತ್ತು. ಆದರೆ ಅದೇನು ದೊಡ್ಡ ವಿಷಯ ಅಲ್ಲ, ಇದು ಬೇರೆಯವರಿಗೂ ಆಗುತ್ತೆ ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ ಅದರ ಹಿಂದೆ ಒಂದು ಭಯಾನಕ ಸತ್ಯವಿತ್ತು!

    ಇದು ಬೆಳಕಿಗೆ ಬಂದದ್ದೂ ಒಂದು ರೋಚಕ ಕಥೆ. ಆ ಮಹಿಳೆಯ ಪತಿ ದೀರ್ಘಕಾಲದಿಂದ ಬೆನ್ನುನೋವಿನ ಸಮಸ್ಯೆಗೆ ತುತ್ತಾಗಿದ್ದರು. ಅವರು ತಮ್ಮ ಚಿಕಿತ್ಸೆಗಾಗಿ ಪತ್ನಿಯೊಂದಿಗೆ ವೈದ್ಯರ ಬಳಿ ಹೋಗಿದ್ದರು. ಆಗ ವೈದ್ಯರ ಸೂಕ್ಷ್ಮ ದೃಷ್ಟಿಯೇ ಆ ಮಹಿಳೆಯನ್ನು ಕಾಪಾಡಿದ್ದು! ವೈದ್ಯರಿಗೆ ಆ ಮಹಿಳೆಯ ಮೂಗು ಹಾಗೂ ತುಟಿಗಳು ಸಾಮಾನ್ಯಕ್ಕಿಂತ ತುಸು ಹೆಚ್ಚೇ ದೊಡ್ಡದಾಗಿವೆ ಎಂದೆನಿಸಿದೆ. ಆ ಮಹಿಳೆ ಮಾತನಾಡುವಾಗಲೂ ಭಾರವಾದ ಧ್ವನಿಯಿಂದ ಮಾತನಾಡುತ್ತಿದ್ದರು. ಅದಲ್ಲದೇ ಆಕೆಯ ನಾಲಿಗೆಯೂ ತುಸು ದಪ್ಪವಾಗಿಯೇ ಇದ್ದದ್ದನ್ನು ವೈದ್ಯರು ಗಮನಿಸಿದ್ದಾರೆ.

    ತಮ್ಮ ಪೂರ್ವ ಅನುಭವದಿಂದ ಇದು ಯಾವುದೋ ಒಂದು ರೀತಿಯ ಸಮಸ್ಯೆ ಎಂದು ಕೂಡಲೇ ಅರ್ಥ ಮಾಡಿಕೊಂಡರು. ನಂತರ ಅವರು ಆ ಮಹಿಳೆಯ ಬಳಿ ‘ನಿಮ್ಮ ಚಪ್ಪಲಿಯ ಗಾತ್ರ ಇತ್ತೀಚೆಗೆ ಹೆಚ್ಚಾಗಿದೆಯಾ?’ ಎಂದು ಕೇಳಿದ್ದಾರೆ. ಅದಕ್ಕೆ ಆಕೆ,’ ಹೌದು ಎರಡು ವರ್ಷಗಳ ಹಿಂದೆ ನನ್ನ ಚಪ್ಪಲಿ ಸೈಜ್ 5 ಇತ್ತು. ಈಗ 7 ಆಗಿದೆ. ವಯಸ್ಸಾದ ಹಾಗೆ ಕಾಲುಗಳ ಗಾತ್ರವೂ ಬೆಳೆಯುವುದು ಸಾಮಾನ್ಯ ಅಲ್ಲವೇ?’ ಎಂದು ಹೇಳಿದ್ದಾರೆ.

    ಅದಕ್ಕೆ ವೈದ್ಯರು, “ಪಾದಗಳು ಬಾಲ್ಯ ಮತ್ತು ಹದಿಹರೆಯದಲ್ಲಿ ಬೆಳೆಯುತ್ತವೆ. ಆದರೆ ನಿಮ್ಮ ವಯಸ್ಸಿನಲ್ಲಿ ಅವು ಬೆಳೆಯುವುದಿಲ್ಲ. ನಿಮಗೆ ಆರೋಗ್ಯದ ಸಮಸ್ಯೆ ಇದೆ. ಕೆಲವು ರಕ್ತ ಪರೀಕ್ಷೆಗಳನ್ನು ಮಾಡುತ್ತೇವೆ ಎಂದರು.

    ರಕ್ತ ಪರೀಕ್ಷೆಯಲ್ಲಿ ಇನ್ಸುಲಿನ್ ನಂತಹ ಬೆಳವಣಿಗೆಯ ಅಂಶ 1 (ಐಜಿಎಫ್ 1) ತುಂಬಾ ಹೆಚ್ಚಾಗಿದೆ ಎಂದು ತಿಳಿದಿದೆ. ಇದು ಹೆಚ್ಚುವರಿ ಬೆಳವಣಿಗೆಯ ಹಾರ್ಮೋನ್ (ಜಿಎಚ್) ಸ್ರವಿಸುವಿಕೆಯನ್ನು ಸೂಚಿಸುತ್ತದೆ. ಮೆದುಳಿನ ಪಿಟ್ಯೂಟರಿ ಗ್ರಂಥಿಯಿಂದ ಜಿಎಚ್ ಸ್ರವಿಸುವುದರಿಂದ, ನಾನು ಎಂ.ಆರ್.ಐ ಪರೀಕ್ಷೆ ಮಾಡಲಾಯಿತು. ಆಗ ತಿಳಿದು ಬಂದದ್ದು ಆ ಮಹಿಳೆಗೆ ಪಿಟ್ಯುಟರಿ ಅಡೆನೋಮಾ (ಹಾನಿಕಾರಕ ಗೆಡ್ಡೆ) ಎಂಬ ಸಮಸ್ಯೆ ಇದೆ ಎಂದು! ಇದಾದ ಮೇಲೆ ಆ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದರಲ್ಲಿ ಮೂಗಿನ ಮೂಲಕ ಆ ಹಾನಿಕಾರಕ ಗೆಡ್ಡೆಯನ್ನು ಹೊರತೆಗೆಯಲಾಯಿತು.

    ಆಕೆಯ ಚೇತರಿಕೆಯ ಬಗ್ಗೆ ಮಾತನಾಡಿದ ವೈದ್ಯರು, ‘ಅವರು ಅತ್ಯುತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಮುಖದ ಲಕ್ಷಣಗಳು, ನಾಲಿಗೆ ಮತ್ತು ಮಾತು ಸುಧಾರಿಸಿದೆ. ಐಜಿಎಫ್ 1 ಮಟ್ಟವು 12 ವಾರಗಳ ನಂತರ ಸಾಮಾನ್ಯಕ್ಕೆ ಬಂದು ನಿಂತಿದೆ. ರೋಗ ಪತ್ತೆಯಾಗುವ ಮೊದಲು ಅವರು ಬಹುಶಃ ಎರಡು ವರ್ಷಗಳ ಕಾಲದಿಂದ ಆ ಗಡ್ಡೆಯನ್ನುಹೊಂದಿದ್ದರು. ಅದೃಷ್ಟವಶಾತ್ ಆ ಮಹಿಳೆ ಗಂಭೀರ ಾರೋಗ್ಯ ಸಮಸ್ಯೆಯಿಂದ ಪಾರಾಗಿದ್ದಂತು ನಿಜ.

    ಅಂದ ಹಾಗೆ ಈ ಮಾಹಿತಿಯನ್ನು ಹೈದ್ರಾಬಾದ್ ನ ಅಪೋಲೊ ಆಸ್ಪತ್ರೆಯ ವೈದ್ಯ ಡಾ| ಸುಧೀರ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಹದಿಹರೆಯ ಕಳೆದ ಓದುಗರು ತಮ್ಮ ಕಾಲಿನ ಗಾತ್ರ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts