ಕೊಟ್ಟೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದಲ್ಲಿ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿಗಳಿದ್ದು, ಪಂಚಪದಿ ಶೋಧಿಸಲಾಗಿದೆ ಎಂದು ಯುವ ಕವಿ, ನಾಟಕಕಾರ ಎಚ್.ಧನಂಜಯ ಹೇಳಿದರು.
ಪಟ್ಟಣದಲ್ಲಿ ತೇರುಬಯಲು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಡೋಣೂರು ಚಾನುಕೋಟಿ ಮಠವು ಬಸವೇಶ್ವರ ಜಯಂತಿ ಹಾಗೂ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಪಂಚಪದಿ ಹೊಸ ಆವಿಷ್ಕಾರ. ಛಂದಸ್ಸಿನ ಹೊಸ ಲಕ್ಷಣವಿದು. ಈ ಸೂತ್ರದ ಆಧಾರದ ಮೇಲೆ ಯಾರು ಬೇಕಾದರೂ ಸಾಹಿತ್ಯ ರಚಿಸಬಹುದು ಎಂದು ಸಭೆಯಲ್ಲಿ ಉದಾಹರಣೆ ಸಮೇತ ವಿವರಿಸಿದರು. ನಾನೇನು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿಲ್ಲ. ಕೇವಲ ಪಿಯುಸಿ ಓದಿದ್ದೇನೆ. ವ್ಯಾಕರಣದಲ್ಲಿ ಅತೀವ ಆಸಕ್ತಿ ಹಾಗೂ ಕನ್ನಡ ಸಾಹಿತ್ಯ ಅಭ್ಯಾಸ ಬಲದಿಂದ ಪಂಚಪದಿ ಶೋಧಿಸಿ ಪರಿಚಯಿಸುತ್ತಿದ್ದೇನೆ ಎಂದರು.
ನಾಟಿ ವೈದ್ಯ ರಾಜಾಬಕ್ಷಿ, ಅಂತಾರಾಷ್ಟ್ರೀಯ ಕ್ರಿಕೆಟಿಗ, ಶಿಕ್ಷಕ ಪ್ರವೀಣ ಕುಮಾರ್, ಸಾಹಿತಿ ಉಜ್ಜಿನಿ ರುದ್ರಪ್ಪ, ಶಿಕ್ಷಕ ಕೆ.ಟಿ.ಸಿದ್ದರಾಮೇಶ ಮಾತನಾಡಿದರು. ಡೋಣೂರು ಚಾನುಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಎಂ.ಎಂ.ಜೆ. ಕಾವ್ಯ ಮತ್ತು ತಂಡದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಶ್ರೀಮಠದ ಶಿಷ್ಯರು ಮಂತ್ರಪಠಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.