More

    ಆಶ್ವಾಸನೆಗಳ ಈಡೇರಿಕೆಯ ಗ್ಯಾರಂಟಿ ಕಾರ್ಡ್ ಹಂಚಿಕೆ

    ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್, ಮನೆಯ ಓರ್ವ ಗೃಹಿಣಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕೆ ನೆರವು ನೀಡುವುದಾಗಿ ನಾಯಕರು ಘೋಷಿಸಿದ್ದಾರೆ. ಮುಂದಿನ ವಾರದಿಂದಲೇ ಜಿಲ್ಲೆಯ ಎಲ್ಲ ಮನೆಗಳಿಗೆ ಈ ಬಗ್ಗೆ ಗ್ಯಾರಂಟಿ ಕಾರ್ಡ್ ತಲುಪಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
    ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಮನೆಯವರ ವಿವರ, ವಿಳಾಸ ಸಂಗ್ರಹಿಸಿ ಅದನ್ನು ಕೆಪಿಸಿಸಿಗೆ ಕಳುಹಿಸುತ್ತಾರೆ. ಅದೇ ಸಂದರ್ಭದಲ್ಲಿ ಭರವಸೆ ಈಡೇರಿಕೆಯ ಗ್ಯಾರಂಟಿ ಕಾರ್ಡ್ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅವೈಜ್ಞಾನಿಕ ಆಡಳಿತದಿಂದ ಆರ್ಥಿಕತೆ ನೆಲ ಕಚ್ಚಿದೆ. ಭಾರತವೂ ಪಾಕಿಸ್ತಾನದ ಹಾದಿಯಲ್ಲೇ ಸಾಗುತ್ತಿದೆ. ಯಾವ ವರ್ಗದವರೂ ಸಂತೋಷದಿಂದ ಇಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
    ಲೋಕಸಭಾ ಚುನಾವಣೆಗಳಲ್ಲಿ ವಿಐಎಸ್‌ಎಲ್ ಹಾಗೂ ಎಂಪಿಎಂ ಹೆಸರು ಹೇಳಿಕೊಂಡೇ ಬಿಜೆಪಿ ಭದ್ರಾವತಿಯಲ್ಲಿ ಮತಯಾಚನೆ ಮಾಡುತ್ತಿತ್ತು. ಆದರೆ ಆ ಕಾರ್ಖಾನೆಗಳನ್ನು ಉಳಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭದ್ರಾವತಿಯ ಎರಡೂ ಪ್ರಮುಖ ಕಾರ್ಖಾನೆಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
    ಎಲ್ಲ ಚುನಾವಣೆಗಾಗಿ
    ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲು ಹಣವಿಲ್ಲ. ಇನ್ನು ಸಾವಿರಾರು ಕೋಟಿ ರೂ. ಕಾಮಗಾರಿ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಎಚ್.ಎಸ್.ಸುಂದರೇಶ್, ಇದೆಲ್ಲವೂ ಚುನಾವಣೆಗಾಗಿ ಎಂದು ಟೀಕಿಸಿದರು.
    ಕೆಪಿಸಿಸಿ ಉಪಾಧ್ಯಕ್ಷ ಬಲದೇವ ಕೃಷ್ಣ, ಬ್ಲಾಕ್ ಅಧ್ಯಕ್ಷ ಕಲೀಂ ಉಲ್ಲಾ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಪ್ರಮುಖರಾದ ಸತ್ಯನಾರಾಯಣ ರಾವ್, ಪ್ರವೀಣ್‌ಕುಮಾರ್, ಚಂದ್ರಭೂಪಾಲ, ಸೈಯದ್ ವಾಹೀದ್ ಅಡ್ಡು, ಚಂದ್ರಶೇಖರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts