More

    ಶಿವಮೊಗ್ಗ ಪಾಲಿಕೆ ಕಂದಾಯಾಧಿಕಾರಿ ಸೇವೆಯಿಂದ ವಜಾ: ತನಿಖೆಗೆ ತೀರ್ಮಾನ

    ಶಿವಮೊಗ್ಗ: ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಬಾಲಾಜಿರಾವ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಅವರ ಸೇವಾವಧಿಯಲ್ಲಿ ಕಂದಾಯ ವಿಭಾಗದಲ್ಲಿ ನಡೆದಿರುವ ಕಡತ ವಿಲೇವಾರಿಗಳ ಬಗ್ಗೆ ತನಿಖೆ ನಡೆಸಲು ಮೇಯರ್ ಸುವರ್ಣಾ ಶಂಕರ್ ತೀರ್ಮಾನ ಕೈಗೊಂಡರು.

    ಶುಕ್ರವಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಂದಾಯ ವಿಭಾಗದ ಅವ್ಯವಸ್ಥೆ, ಅಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷ ಸದಸ್ಯರು ಆರೋಪಗಳ ಸುರಿಮಳೆಗೈದರು. ಒಂದು ಹಂತದಲ್ಲಿ ಮೇಯರ್ ಎದುರು ತೆರಳಿ ಬಾಲಾಜಿ ರಾವ್ ಅವರನ್ನು ಕಂದಾಯ ಅಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

    ಪ್ರತಿಪಕ್ಷ ಸದಸ್ಯರು ಮಾತ್ರವಲ್ಲದೇ ಆಡಳಿತಾರೂಢ ಬಿಜೆಪಿ ಸದಸ್ಯರೇ ಕಂದಾಯ ಅಧಿಕಾರಿ ವಿರುದ್ಧ ಗಂಭಿರ ಆರೋಪ ಮಾಡಿದರು. ಸ್ವತಃ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸ್ಪಪ, ಕಂದಾಯ ವಿಭಾಗದ ಅವ್ಯವಹಾರ, ಭ್ರಷ್ಟಾಚಾರ ಒಪ್ಪಿಕೊಂಡರು. ಒಂದು ತಾಸಿನ ಸುದೀರ್ಘ ಚರ್ಚೆ ಬಳಿಕ ಕಂದಾಯ ಅಧಿಕಾರಿಯನ್ನು ಇಂದಿನಿಂದಲೇ ಸೇವೆಯಿಂದ ಬಿಡುಗಡೆಗೊಳಿಸುವ ತೀರ್ವನವನ್ನು ಮೇಯರ್ ಪ್ರಕಟಿಸಿದರು.

    ಕಿಡಿಕಾರಿದ ಎಂಎಲ್​ಸಿ: ಆಯುಕ್ತರೇ ನಿಮಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ನೀವು ಹೇಳಿದರೂ ಕಂದಾಯ ಇಲಾಖೆಯಲ್ಲಿ ಕೆಲಸಗಳಾಗಲ್ಲ. ಇಲ್ಲಿ ಒಂದೆರಡು ಸಾವಿರವಲ್ಲ, 25-50 ಸಾವಿರ ರೂ. ಫಿಕ್ಸ್ ಮಾಡಿಕೊಂಡಿದ್ದಾರೆ. ದುಡ್ಡು ಕೊಡದೇ ಕಡತ ಮುಂದಕ್ಕೆ ಹೋಗಲ್ಲ. ನಿಮ್ಮ ಮಾತು ಕೇಳದವರನ್ನು ಇಲ್ಲಿಂದ ಬಿಡುಗಡೆಗೊಳಿಸಿ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಏರಿದ ದ್ವನಿಯಲ್ಲಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

    ಯಾವುದಾದರೂ ಕೆಲಸ ಕಾನೂನುಬದ್ಧವಾಗಿ ಮಾಡಲು ಸಾಧ್ಯವಿಲ್ಲ ಎಂದಾದರೆ, ಕಡತದ ಮೇಲೆ ಸಕಾರಣದ ಹಿಂಬರಹ ನೀಡಲಿ. ಕಾನೂನುಬಾಹಿರವಾಗಿ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ಕಂದಾಯ ವಿಭಾಗದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಾಕಷ್ಟು ದಾಖಲೆಗಳಿವೆ ಎಂದು ಸಭೆಯನ್ನು ಗಂಭೀರ ಚರ್ಚೆಯತ್ತ ಕೊಂಡೊಯ್ದರು.

    ಡಿಜಿ ಫೈಲ್ ಇದ್ರೂ ಸರದಿ ಏಕೆ? ಪಾಲಿಕೆಯಲ್ಲಿ ಡಿಜಿ ಫೈಲ್ ಸಾಫ್ಟ್​ವೇರ್ ಇದೆ. ಆದರೂ ಕಂದಾಯ ಇಲಾಖೆ ಅಧಿಕಾರಿಗಳ ಕೊಠಡಿ ಎದುರು ನೂರಾರು ಮಂದಿ ಸರದಿ ಸಾಲು ಏಕೆ? ಕರೊನಾ ಸಮಯದಲ್ಲಿ ಜನರನ್ನು ಹೀಗೆ ನಿಲ್ಲಿಸುವುದು ಸರಿಯೇ ಎಂದು ಕಾಂಗ್ರೆಸ್ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಬಾಲಾಜಿ ರಾವ್ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡಿದ ಮೊದಲ ದಿನದಿಂದ ಇಂದಿನವರೆಗಿನ ಅವರ ಕೊಠಡಿಯ ಸಿಸಿಟಿವಿ ದೃಶ್ಯಾವಳಿ ಪ್ರದರ್ಶಿಸಿ ಎಂದು ಒತ್ತಾಯಿಸಿದರು.

    ಆರ್​ಒ ಸೆಕ್ಷನ್​ಗೆ ಕ್ಯಾನ್ಸರ್… ಹೀಗೆಂದು ಪಾಲಿಕೆ ಕಂದಾಯ ವಿಭಾಗವನ್ನು ಹೋಲಿಕೆ ಮಾಡಿದ್ದು ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ. ಕಂದಾಯ ವಿಭಾಗಕ್ಕೆ ಕ್ಯಾನ್ಸರ್ ಬಂದು ಬಹಳ ವರ್ಷಗಳೇ ಆಗಿವೆ. ನಾಗರಿಕರಲ್ಲಿ ಈ ವಿಭಾಗ ಹೇಸಿಗೆ ಹುಟ್ಟಿಸಿದೆ. ಆರ್​ಒ ಸೆಕ್ಷನ್ ಕರೊನಾಕ್ಕಿಂತಲೂ ಭೀಕರ. ಇಲ್ಲಿಗೆ ಸಾಮಾನ್ಯ ಜನರು ಬರುವ ಪರಿಸ್ಥಿತಿಯಿಲ್ಲ. ಇದಕ್ಕೆ ಇಂಜೆಕ್ಷನ್ ನೀಡಲೇಬೇಕು. ತನಿಖೆ ನಡೆಸಿ ಕ್ರಮ ಕೈಗೊಳ್ಳಲೇಬೇಕು. ಅದಕ್ಕೂ ಮುನ್ನ ಕಂದಾಯಾಧಿಕಾರಿ ಬಾಲಾಜಿರಾವ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು. ಪಾಲಿಕೆಯಿಂದಲೇ ನೀಡಿರುವ ಪಟ್ಟಾವನ್ನು ನಕಲು ಎನ್ನುವ ಕಂದಾಯ ಇಲಾಖೆ ಅಧಿಕಾರಿಗಳಿಗೆ ಏನೆನ್ನಬೇಕು? ಇವರೆಲ್ಲ ಮಾಡಿದ ಅವ್ಯವಹಾರದ ಪರಿಣಾಮವಾಗಿ ಆಶ್ರಯ ಬಡಾವಣೆಯ ನೂರಾರು ಮಂದಿ ಇಂದು ಅತಂತ್ರರಾಗಿದ್ದಾರೆ. ಬಡವರ ನಿವೇಶನಗಳನ್ನು ಇನ್ನಾರಿಗೋ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನನಗೇ ಫೋನ್ ಮಾಡ್ತಾರೆ: ಕಂದಾಯ ಅಧಿಕಾರಿ ಬಾಲಾಜಿ ರಾವ್ ಇವತ್ತು ಬೆಳಗ್ಗೆ ನನಗೆ ಫೋನ್ ಮಾಡಿ, ಇಂದಿನ ಮೀಟಿಂಗ್​ನಲ್ಲಿ ನನ್ನ ವಿಷಯವೇನಾದರೂ ಪ್ರಸ್ತಾಪಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಪಾಲಿಕೆ ಸದಸ್ಯರನ್ನು ಇವರು ಏನೆಂದು ಕೊಂಡಿದ್ದಾರೆ. ಇವರ ಅವ್ಯವಹಾರಕ್ಕೆ ನಮ್ಮನ್ನು ಶಾಮೀಲು ಮಾಡಿಕೊಳ್ಳಲು ಯತ್ನಿಸುತ್ತಾರೆ. ಇಂತಹವರನ್ನು ಕಂದಾಯ ಇಲಾಖೆಯಲ್ಲಿ ಮುಂದುವರಿಸುವುದು ಸರಿಯಲ್ಲ. ಇದರಿಂದ ಪಾಲಿಕೆಗೆ ಸ್ವಲ್ಪವೂ ಗೌರವ ಬರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್ ಆಕ್ಷೇಪ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts