More

    ಬಂದಿದ್ದು ಧಮ್ಕಿ ಹಾಕಲು, ಆದ್ರೆ ಮಾಡಿದ್ದು ಕೊಲೆ!

    ಶಿವಮೊಗ್ಗ: ಶಿವಮೊಗ್ಗಕ್ಕೆ ಕಾಲಿಡದಂತೆ ಬೆದರಿಕೆ ಹಾಕಿದ್ದ ರೌಡಿಶೀಟರ್ ಹಂದಿ ಅಣ್ಣಿಗೆ ಧಮ್ಕಿ ಹಾಕಲು ಕಾಡಾ ಕಾರ್ತಿಕ್ ಮತ್ತು ಆತನ ತಂಡ ನಿರ್ಧರಿಸಿತ್ತು. ಅದರಂತೆ ಇನ್ನೋವಾ ಕಾರಿನಲ್ಲಿ ಬಂದಿದ್ದರು. ಆದರೆ ಕೊನೇ ಕ್ಷಣದಲ್ಲಿ ಧಮ್ಕಿ ಹಾಕುವ ಬದಲು ಜೀವ ತೆಗೆಯಲು ನಿರ್ಧರಿಸಿ ಹಾಡಹಗಲೇ ಹಂದಿ ಅಣ್ಣಿಯ ಹತ್ಯೆ ಮಾಡಿದ್ದಾಗಿ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
    ಬಂಕ್‌ಬಾಲು ಹತ್ಯೆ ಪ್ರಕರಣದಲ್ಲಿ ಹಂದಿ ಅಣ್ಣಿ ಹುಡುಗರಿದ್ದರು. ಬಾಲು ಕೊಲೆಯಾದ ದಿನ ಕಾಡಾ ಕಾರ್ತಿಕ್ ಕೂಡ ಜತೆಗಿದ್ದ. ಸಾಕ್ಷಿ ಹೇಳುವುದಕ್ಕೆ ತಡೆವೊಡ್ಡಲು ಅಣ್ಣಿ, ಕಾರ್ತಿಕ್‌ಗೆ ಶಿವಮೊಗ್ಗಕ್ಕೆ ಬರದಂತೆ ಬೆದರಿಕೆ ಹಾಕಿದ್ದ. ಇದರಿಂದ ತನ್ನ ಸ್ವಂತ ತಂಗಿ ಮದುವೆಗೂ ಕಾರ್ತಿಕ್‌ಗೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಕಾರ್ತಿಕ್ ಕೂಡ ಹುಡುಗರನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಲು ನಿರ್ಧರಿಸಿದ್ದ. ಅದಕ್ಕಾಗಿ ಹುಡುಗರನ್ನು ಸಿದ್ಧಪಡಿಸಿಕೊಂಡು ಜುಲೈ 1ರಿಂದಲೇ ಅಣ್ಣಿಯ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ಆದರೆ ಬೆದರಿಕೆ ಹಾಕುವ ಬದಲು ಕೊಲೆ ಮಾಡಿದರೆ ಶಿವಮೊಗ್ಗದಲ್ಲಿ ರಾಜಾರೋಷವಾಗಿ ಓಡಾಡಬಹುದೆಂಬ ಆಸೆಯಿಂದ ಕೊಲೆಗೆ ಕಾರ್ತಿಕ್ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.
    ಜಾತ್ರೆಯಲ್ಲಿ ಮಧು, ಆಂಜನೇಯ ಪರಿಚಯ: ವಿಚಿತ್ರವೆಂದರೆ ಬೆಂಗಳೂರು, ದಾವಣಗೆರೆ ಸೇರಿ ಹಲವೆಡೆ ಓಡಾಡಿಕೊಂಡಿದ್ದ ಕಾರ್ತಿಕ್‌ಗೆ ಎರಡು ತಿಂಗಳ ಹಿಂದೆ ಮಧು ಮತ್ತು ಆಂಜನೇಯ ರಾಣೆಬೆನ್ನೂರು ಜಾತ್ರೆಯೊಂದರಲ್ಲಿ ಪರಿಚಿತರಾಗಿದ್ದರು. ಅಂದಿನಿಂದ ಕಾರ್ತಿಕ್ ಅವರಿಬ್ಬರ ಜತೆ ಸಂಪರ್ಕದಲ್ಲಿದ್ದ. ಅಣ್ಣಿಯನ್ನು ಕೊಲೆ ಮಾಡುವುದಕ್ಕೂ ಎರಡು ದಿನ ಮುಂಚೆ ಪುತ್ತೂರಿನಿಂದ ದಿನಕ್ಕೆ ನಾಲ್ಕು ಸಾವಿರ ರೂ.ನಂತೆ ಇನ್ನೋವಾ ಕಾರನ್ನು ಕಾರ್ತಿಕ್ ಬಾಡಿಗೆಗೆ ಪಡೆದು ತಂದಿದ್ದ. ಈ ಮೊದಲು ಅಲ್ಲೇ ಕಾರು ಬಾಡಿಗೆಗೆ ಪಡೆಯುತ್ತಿದ್ದ ಕಾರಣ ಮಾಲೀಕ ಮರು ಮಾತನಾಡದೆ ಬಾಡಿಗೆಗೆ ಕಳುಹಿಸಿದ್ದ. ಆದರೆ ಅದೇ ಕಾರನ್ನು ಆರೋಪಿಗಳು ಕೊಲೆ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ.
    ಬೆಳಗ್ಗೆಯಿಂದಲೇ ಅಣ್ಣಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ವಿನೋಬನಗರ ಡಿವಿಎಸ್ ಪ್ರೌಢಶಾಲೆ ಬಳಿ ಬೈಕ್‌ನಲ್ಲಿ ಕುಳಿತಿದ್ದನ್ನು ಕಾರ್ತಿಕ್ ಗಮನಿಸಿದ್ದ. ತಕ್ಷಣವೇ ಕಾರನ್ನು ಯೂಟರ್ನ್ ಮಾಡಿಕೊಂಡು ಬಂದ ಕಾರ್ತಿಕ್ ಅಣ್ಣಿ ಕುಳಿತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಕೆಳಗೆ ಬಿದ್ದ ಅಣ್ಣಿ ಇದೊಂದು ಅಪಘಾತ ಎಂದೇ ಭಾವಿಸಿದ್ದ. ಆದರೆ ಕಾರ್ತಿಕ್‌ನನ್ನು ನೋಡಿದ ಬಳಿಕ ಎದ್ದು ಓಡಲು ಆರಂಭಿಸಿದ್ದ. ಬೆನ್ನಿಟ್ಟಿದ ತಂಡ ಪೊಲೀಸ್ ಚೌಕಿಯಲ್ಲೇ ಬರ್ಬರ ಹತ್ಯೆ ಮಾಡಿತ್ತು.
    ಹೊನ್ನಾಳಿ ಕೆರೆಯಲ್ಲಿ ಮಾರಕಾಸ್ತ್ರ: ಕೊಲೆ ಮಾಡಿದ ಬಳಿಕ ಆರೋಪಿಗಳು ಹೊನ್ನಾಳಿ ಬಳಿಯ ಕೆರೆಯೊಂದಕ್ಕೆ ಮಾರಕಾಸ್ತ್ರಗಳನ್ನು ಬಟ್ಟೆ ಸುತ್ತಿ ಬಿಸಾಕಿದ್ದರು. ಬಳಿಕ ಹೊನ್ನಾಳಿ ಬಸ್ ನಿಲ್ದಾಣದ ಬಳಿ ಕಾರು ನಿಲ್ಲಿಸಿ ಕೀಯನ್ನ ಕಾರಿನಲ್ಲಿಟ್ಟು ಬಸ್ ಹತ್ತಿ ಹರಿಹರಕ್ಕೆ ತೆರಳಿದ್ದರು. ಅಲ್ಲಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಮತ್ತೆ ಬೆಂಗಳೂರಿಗೆ ಹೊರಟಿದ್ದರು. ಈ ನಡುವೆ ಜೇಬಿನಲ್ಲಿದ್ದ ಹಣ ಖಾಲಿ ಆದ ಬಳಿಕ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ್ದರು. ಶಿವಮೊಗ್ಗದಲ್ಲಿ ಶರಣಾದರೆ ಸಮಸ್ಯೆ ಎಂದು ಚಿಕ್ಕಮಗಳೂರಿನತ್ತ ಮುಖ ಮಾಡಿದ್ದರು. ಅದೇ ದಿನ ರಾತ್ರಿ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ತೆರಳಿ ಹಂದಿ ಅಣ್ಣಿ ಕೊಲೆ ಮಾಡಿದ್ದಾಗಿ ಶರಣಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts