More

    ವ್ಯಾಪಾರಿಗಳಾದ ವಿದ್ಯಾರ್ಥಿಗಳು-ಮಕ್ಕಳ ಸಂತೆ ಸೂಪರ್!

    ಶಿವಮೊಗ್ಗ: ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆ ಮಂಗಳವಾರ ಅಕ್ಷರಶಃ ಸಂತೆಯಾಗಿತ್ತು. ಅಲ್ಲಿ ವಿದ್ಯಾರ್ಥಿಗಳೇ ವ್ಯಾಪಾರಿಗಳು. ಸಹಪಾಠಿಗಳು, ಶಿಕ್ಷಕರು ಹಾಗೂ ಪಾಲಕರೇ ಗ್ರಾಹಕರು. ಒಂದೇ ಸೂರಿನಲ್ಲಿ ಸೊಪ್ಪು, ತರಕಾರಿ, ಹಣ್ಣು. ವ್ಯಾಪಾರಕ್ಕೆಂದು ಬಂದವರ ಹೊಟ್ಟೆ ತುಂಬಿಸಲು ಪಾನಿಪೂರಿ, ಜ್ಯೂಸ್ ಹಾಗೂ ಚಾಟ್ಸ್.
    ಮಂಗಳವಾರ ನಡೆಯುವ ಮಿಳಘಟ್ಟದ ವಾರದ ಸಂತೆಗಿಂತಲೂ ದೊಡ್ಡ ಪ್ರಮಾಣದಲ್ಲಿ ಮಕ್ಕಳೇ ಸಂತೆ ನಡೆಸಿಕೊಟ್ಟರು. ಅಲ್ಲಿ ತಾಯಂದಿರನ್ನೇ ಗಮನದಲ್ಲಿರಿಸಿಕೊಂಡು ಮಕ್ಕಳು ಸರ, ಕಿವಿಯೋಲೆ, ಬಳೆ ಮುಂತಾದವುಗಳನ್ನೂ ಮಾರಾಟ ಮಾಡಿ ಹಣ ಎಣಿಸಿ ಜೇಬಿಗಿಳಿಸಿಕೊಂಡರು.
    ದುರ್ಗಿಗುಡಿ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯ ಐದನೇ ತರಗತಿಯ ಎ,ಬಿ ಮತ್ತು ಸಿ ಸೆಕ್ಷನ್‌ಗಳ 150ಕ್ಕೂ ಹೆಚ್ಚು ಮಕ್ಕಳು ಮೆಟ್ರಿಕ್ ಮೇಳದಲ್ಲಿ ಖುಷಿಯಿಂದ ಭಾಗವಹಿಸಿದ್ದರು. ಬಗೆ ಬಗೆಯ ಹಣ್ಣುಗಳು, ಮೊಳಕೆ ಕಾಳುಗಳು, ತರಕಾರಿಗಳನ್ನು ಅರ್ಧ, ಒಂದು ಕೆಜಿ ಪ್ಯಾಕ್‌ನಲ್ಲಿಟ್ಟು ಮಾರಾಟ ಮಾಡಿದರು. ತೂಕಕ್ಕಾಗಿ ತೂಕದ ಯಂತ್ರವನ್ನೂ ಇರಿಸಲಾಗಿತ್ತು.
    ಪ್ರತಿ ಸ್ಟಾಲ್‌ನಲ್ಲಿ ಐವರು ಮಕ್ಕಳಿಗೆ ಅವಕಾಶ ನೀಡಲಾಗಿತ್ತು. ಅಚ್ಚುಕಟ್ಟಾಗಿ 10ಕ್ಕೂ ಹೆಚ್ಚು ಮಳಿಗೆಗಳನ್ನು ಸಿದ್ಧಪಡಿಸಲಾಗಿತ್ತು. ಮಕ್ಕಳು ಕಸುಬುದಾರ ವ್ಯಾಪಾರಿಗಳಂತೆ ನೆಲದ ಮೇಲೆ ಕುಳಿತು ವ್ಯಾಪಾರ ಮುಗಿಸಿದರು. ಬೇಕರಿ ವಸ್ತುಗಳ ಖರೀದಿಗೆ ಮಕ್ಕಳು ಮುಗಿಬಿದ್ದ ಕಾರಣ ಜೀವಿತಾ ಹಾಗೂ ತಂಡದವರು ಸುಮಾರು 1,500 ರೂ. ವಹಿವಾಟು ನಡೆಸಿದರು. ತರಕಾರಿ, ಸೊಪ್ಪುಗಳಿಗೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಕಂಡುಬರಲಿಲ್ಲ.
    ಮಾರಾಟ ಪ್ರಕ್ರಿಯೆ, ಲಾಭ, ನಷ್ಟದ ಲೆಕ್ಕಾಚಾರ, ವಿವಿಧ ವಸ್ತುಗಳನ್ನು ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಮಾಡಿದ್ದ ಈ ವ್ಯವಸ್ಥೆಯಿಂದ ಮಕ್ಕಳು ಖುಷಿ ಪಟ್ಟರು. ನಿತ್ಯ ಶಾಲೆಯೊಳಗೆ ಕುಳಿತು ಪಠ್ಯ ಚಟುವಟಿಕೆಯಲ್ಲಿ ತೊಡಗುತ್ತಿದ್ದ ಮಕ್ಕಳಿಗೆ ಹೊಸತನದ ಅನುಭವವಾಯಿತು.
    ಸಂತೆ ನಡೆಯುವ ಪರಿ, ವ್ಯಾಪಾರಿಗಳು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಮಕ್ಕಳು ಅರಿತುಕೊಳ್ಳಲಿ ಎಂಬ ಕಾರಣಕ್ಕೆ ಅರ್ಧ ದಿನದ ಮಟ್ಟಿಗೆ ಸಂತೆಗೆ ಏರ್ಪಾಟು ಮಾಡಿದ್ದೆವು. ಮಕ್ಕಳು ಸಾಮಗ್ರಿಗಳನ್ನು ಖರೀದಿಸಿ, ತಾವೇ ಬೆಲೆ ನಿಗದಿ ಮಾಡಿ ಇಲ್ಲಿಗೆ ತಂದು ಮಾರಾಟ ಮಾಡಿದ್ದಾರೆ. ಈ ವ್ಯವಸ್ಥೆ ಮಕ್ಕಳಿಗೆ ಖುಷಿ ಕೊಟ್ಟಿದೆ ಎಂದು ಸಹಶಿಕ್ಷಕಿ ದೀಪಾ ಕುಬಸದ್ ಹೇಳಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts