More

    ರಕ್ತದಾನದಿಂದ ಏಕಕಾಲದಲ್ಲಿ ಮೂವರ ಪ್ರಾಣ ರಕ್ಷಣೆ ಸಾಧ್ಯ: ಕೆ.ಇ.ಕಾಂತೇಶ್

    ಶಿವಮೊಗ್ಗ: ರಕ್ತದಾನ ಮಾಡುವುದರಿಂದ ಏಕಕಾಲದಲ್ಲಿ ಮೂವರ ಪ್ರಾಣ ಉಳಿಸಲು ಸಾಧ್ಯ. ಹೀಗಾಗಿ ಸಾರ್ವಜನಿಕರು, ರಕ್ತದಾನ ಮಾಡಲು ಸ್ವಪ್ರೇರಣೆಯಿಂದ ಮುಂದಾಗಬೇಕು ಎಂದು ಜಿಪಂ ಸದಸ್ಯ ಕೆ.ಈ.ಕಾಂತೇಶ್ ಮನವಿ ಮಾಡಿದರು.
    ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಭಾವಸಾರ ಯುವಕ ಸಂಘದಿಂದ ಭಾನುವಾರ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾದಂತಹ ಸಂಕಷ್ಟದ ಸಮಯದಲ್ಲಿ ಭಾವಸಾರರು ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
    ಈ ಹಿಂದೆ ಒಬ್ಬರು ರಕ್ತದಾನ ಮಾಡಿದರೆ ಒಬ್ಬರಿಗೆ ಮಾತ್ರ ಮೀಸಲಾಗುತ್ತಿತ್ತು. ಆದರೆ, ಪ್ರಸ್ತುತ ಒಬ್ಬರು ರಕ್ತದಾನ ಮಾಡಿದರೆ, ಮೂರು ಜೀವ ಉಳಿಸಿದಂತಾಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ರಕ್ತದ ಕೊರತೆ ಬಹಳಷ್ಟಿದೆ. ಕರೊನಾ ಕಾರಣದಿಂದ ವೆಂಟಿಲೇಟರ್, ಆಕ್ಸಿಜೆನ್ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. ಇದರ ಜತೆಗೆ ರಕ್ತದ ಕೊರತೆಯಿಂದಲೂ ಹಲವಾರು ಜನರು ಸಾವಿಗೀಡಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷ ಓಂಪ್ರಕಾಶ್ ತೇಲ್ಕರ್ ಮಾತನಾಡಿ, ಜೀವ ಉಳಿಸುವಿಕೆ ನಿಟ್ಟಿನಲ್ಲಿ ಈ ರಕ್ತದಾನ ಶಿಬಿರ ಯಶಸ್ವಿಯಾಗಲಿದೆ. ನಿಮ್ಮ ಕೆಲಸಕ್ಕೆ ಸಮಾಜ ಎಂದಿಗೂ ಜೊತೆಯಲ್ಲಿರುತ್ತದೆ ಎಂದರು.
    ಸಂಘದ ಅಧ್ಯಕ್ಷ ವಿನಯ್ ತಾಂದ್ಲೆ ಅಧ್ಯಕ್ಷತೆ ವಹಿಸಿದ್ದರು. 28 ಯುವಕರು ರಕ್ತದಾನ ಮಾಡಿದರು. ಶ್ರೀ ರಾಮಸೇವಾ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಸ್.ಗಿರೀಶ್, ಸಂಘದ ಕಾರ್ಯದರ್ಶಿ ಸಚಿನ್ ಬೇದ್ರೆ, ರೋಟರಿ ರಕ್ತನಿಧಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಅರಕೆರೆ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಸತೀಶ್, ಗಜೇಂದ್ರನಾಥ್ ಮಾಳೋದೆ, ಪ್ರೆಸ್ಟಿಜಿಯಸ್ ಸುರೇಶ್ ಬೇದ್ರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts