More

    ಮಲೆನಾಡಲ್ಲಿ ಖರೀದಿ ಭರಾಟೆ ಜೋರು

    ಶಿವಮೊಗ್ಗ: ಕಳೆದೆರಡು ವರ್ಷ ಕರೊನಾದಿಂದ ಮಂಕಾಗಿದ್ದ ದಸರಾ ಆಚರಣೆ ಈ ಬಾರಿ ಮಲೆನಾಡಲ್ಲಿ ವಿಜೃಂಭಣೆಯಿಂದ ಸಾಗಿದ್ದು ನಾಡಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಸೋಮವಾರ ಶಿವಮೊಗ್ಗ ನಗರ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದರೆ, ಮತ್ತೊಂದೆಡೆ ಆಯುಧಪೂಜೆ ಮತ್ತು ವಿಜಯದಶಮಿಗೆ ಮಾರುಕಟ್ಟೆ, ಪ್ರಮುಖ ವೃತ್ತಗಳು, ಖಾಸಗಿ ಬಸ್ ನಿಲ್ದಾಣ ಸೇರಿ ರಸ್ತೆಗಳ ಇಕ್ಕೆಲಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು.
    ಅ.4ರಂದು ಆಯುಧ ಪೂಜೆ ಮತ್ತು 5ರಂದು ವಿಜಯದಶಮಿಗೆ ಸಿದ್ಧತೆ ನಡೆಸಿದ್ದ ಜನರು ಬೆಲೆ ಏರಿಕೆ ಬಿಸಿ ನಡುವೆಯೂ ಪ್ರಮುಖ ಮಾರುಕಟ್ಟೆಗಳಲ್ಲಿ ಕಿಕ್ಕಿರಿದು ತುಂಬಿದ್ದರು. ಗ್ರಾಹಕರು ವಾಹನಗಳ ಅಲಂಕಾರಕ್ಕೆ ಬಗೆ ಬಗೆಯ ಹೂವುಗಳು, ಹಣ್ಣು, ಬಾಳೆಎಲೆ, ಕಬ್ಬು, ಬೂದುಗುಂಬಳ, ಮಾವಿನ ಸೊಪ್ಪು ಖರೀದಿಸಿ ಕೊಂಡೊಯ್ದರು.
    ಗಾಂಧಿಬಜಾರ್, ಬಿ.ಎಚ್.ರಸ್ತೆ, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಲಕ್ಷ್ಮೀಟಾಕೀಸ್ ವೃತ್ತ, ಹೊಳೆ ಬಸ್ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳ ಸಮೀಪ ವ್ಯಾಪಾರಿಗಳು ಹೂವು, ಹಣ್ಣು ಗಾಡಿಗಳನ್ನಿಟ್ಟುಕೊಂಡು ಮಾರಾಟಕ್ಕೆ ಅಣಿಯಾಗಿದ್ದರು. ಶಿವಪ್ಪನಾಯಕ ಹೂವಿನ ಮಾರ್ಕೆಟ್ ಮತ್ತು ಗಾಂಧಿಬಜಾರ್‌ನಲ್ಲಿ ಕಾಲಿಡದಷ್ಟು ಜನದಟ್ಟಣೆ ಹೆಚ್ಚಾಗಿತ್ತು. ಸ್ವಲ್ಪ ದುಬಾರಿ ಆಗಿದ್ದರೂ ಗ್ರಾಹಕರು ಅಲಂಕಾರ ಮತ್ತು ಪೂಜೆಗೆ ಹೂವು-ಹಣ್ಣು ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    ದಸರಾ ಹಬ್ಬಕ್ಕೆ ಅಣಿಯಾಗುತ್ತಿದ್ದ ಜನರು ಹೊಸ ಬಟ್ಟೆ, ಆಭರಣಗಳ ಖರೀದಿಗೂ ಮುಗಿ ಬಿದ್ದಿದ್ದರು. ವಾಹನಗಳು, ಗ್ಯಾರೇಜ್, ವರ್ಕ್‌ಶಾಪ್, ಕೈಗಾರಿಕೆಗಳು, ಚಿಕ್ಕಪುಟ್ಟ ಕಾರ್ಖಾನೆಗಳು, ಅಂಗಡಿ ಮುಂಗಟ್ಟುಗಳನ್ನು ಸೋಮವಾರವೇ ಹಬ್ಬಕ್ಕೆ ಅಣಿ ಮಾಡಿ ಆಯುಧಪೂಜೆಗೆ ತಯಾರಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts