More

    ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಹಿರಿದು; ಕಾಶೀ ಜಗದ್ಗುರುಗಳ ಆಶೀರ್ವಚನ

    ಬೆಂಗಳೂರು : ಆಧುನಿಕತೆ, ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಸಮುದಾಯಕ್ಕೆ ನಮ್ಮ ಮೂಲ ಸಂಸ್ಕೃತಿಯನ್ನು ಮನವರಿಕೆ ಮಾಡಿ ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

    ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆಯ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ವೀರಶೈವ ಲಿಂಗಾಯತ ಸಮಾಜದ ಬಹಳಷ್ಟು ಜನ ಕೇವಲ ಸರ್ಟಿಫಿಕೇಟ್‌ನಲ್ಲಿ ಲಿಂಗವಂತರಾಗಿದ್ದಾರೆಯೇ ವಿನಃ ಆಚರಣೆಯಲ್ಲಿ ಆಗಿಲ್ಲ. ಸರ್ಟಿಫಿಕೇಟ್ ಕೇವಲ ಬಂದೂಕು ಬಳಕೆಗೆ ಬೇಕಾದ ಲೈಸೆನ್ಸ್ ಇದ್ದಂತೆ. ಇಷ್ಟಲಿಂಗವು ಬಂದೂಕು ಇದ್ದಂತೆ. ಅದರಿಂದ ಅರಿಷಡ್ವರ್ಗಗಳೆಂಬ ಶತ್ರುಗಳನ್ನು ನಾಶಮಾಡಿ ಆಧ್ಯಾತ್ಮ ಸಾಧನೆಯನ್ನು ಮಾಡಬಹುದು. ಈ ಸಂಸ್ಕಾರವನ್ನು ಮಕ್ಕಳಿದ್ದಾಗಲೇ ರೂಢಿಸಿದರೆ ಜೀವನ ಪೂರ್ತಿ ಅವರು ಧರ್ಮಾಚರಣೆಯನ್ನು ಮಾಡುತ್ತಾರೆ. ಇಲ್ಲಿ ತಾಯಂದಿರ ಪಾತ್ರ ಬಹಳ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ‘ತಾಯಿ ತಾನೇ ಮೊದಲ ಗುರುವು’ ಎಂಬ ಮಾತು ಅರ್ಥಪೂರ್ಣ.

    ಮನುಷ್ಯ ಹುಟ್ಟುವುದಕ್ಕಿಂತಲೂ ಮೊದಲೇ ಸಂಸ್ಕಾರ ನೀಡುವ ಜಗತ್ತಿನ ಏಕೈಕ ಧರ್ಮ ವೀರಶೈವ ಧರ್ಮ. ಆದ್ದರಿಂದ ಗರ್ಭದಲ್ಲಿದ್ದಾಗ ಧಾರಣೆ ಮಾಡುವ ಇಷ್ಟಲಿಂಗವನ್ನು ಭೂಗರ್ಭದೊಳಗೆ ಹೋಗುವವರೆಗೆ ನಿತ್ಯ ಪೂಜಿಸಬೇಕು ಎಂದು ಜಗದ್ಗುರುಗಳು ವಿವರಿಸಿದರು. ಕಾಶೀ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯ ವಹಿಸಿದ್ದರು.

    ಸಮಾರಂಭದಲ್ಲಿ ದಾನಚಿಂತಾಮಣಿ ಲಿಂಗೈಕ್ಯ ಕಮಲಮ್ಮ ಮತ್ತು ಶಿವಪ್ಪಶೆಟ್ಟರ ಸ್ಮರಣಾರ್ಥ ಪ್ರತಿವರ್ಷ ಕೊಡಮಾಡುವ ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ಯನ್ನು ಜಗದ್ಗುರು ರೇಣುಕಾಚಾರ್ಯ ಕಾಲೇಜಿನಿ ನಿವೃತ್ತ ಪ್ರಾಂಶುಪಾಲರಾದ ಡಾ.ಸಿ.ಯು.ಮಂಜುನಾಥ್ ಅವರಿಗೆ ನೀಡಲಾಯಿತು. ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಪ್ರವಚನ ಮಾಡಿದರು. ಶಿವಗಂಗೆ ಶ್ರೀಗಳು, ಬಿ.ಎಸ್.ವಾಗೀಶ ಪ್ರಸಾದ್, ಎಂ.ಮಾದಯ್ಯ, ಬಿ.ಎಸ್.ಪರಮಶಿವಯ್ಯ. ಡಾ.ಸಿ.ಯು. ಉಮಾದೇವಿ ಉಮಾಶಂಕರ್, ಗಾಯಿತ್ರಿ ಶಶಿಧರ್, ಶಾಂತ ವಿ.ಗೌಡರ್, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts