More

    ವಿನಯ್‌ಕುಲಕರ್ಣಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡ: ಸಿದ್ದರಾಮಯ್ಯ ಗಂಭೀರ ಆರೋಪ

    ಶಿವಮೊಗ್ಗ: ಬಿಜೆಪಿ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಿಬಿಐ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈವಾಡವಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
    ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಶಿವಮೊಗ್ಗ ಹೆಲಿಪ್ಯಾಡ್‌ಗೆ ಬಂದಿಳಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ವಿನಯ್‌ಕುಲಕರ್ಣಿ ಅವರನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ವಿನಯ್‌ಕುಲಕರ್ಣಿ ಪ್ರಬಲ ಸ್ಪರ್ಧಿಯಾಗಿದ್ದರು. ಅದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದರು.
    ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರೇ ಇರಲಿಲ್ಲ. ಆದರೆ ಇದೀಗ ಸಿಬಿಐನವರು ಸುದೀರ್ಘ ತನಿಖೆ ನೆಪದಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಪ್ರಕರಣ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ದೂರಿದರು.
    ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು:
    ಶಿರಾ ಮತ್ತು ಆರ್‌ಆರ್ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರವಾಗಿದೆ. ಆದರೆ ಯಾವ ಆಧಾರದ ಮೇಲೆ ಸಮೀಕ್ಷೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ನಾಲ್ಕೈದು ದಿನ ಎರಡೂ ಕ್ಷೇತ್ರದಲ್ಲಿ ಓಡಾಡಿದಾಗ ಜನರ ಒಲವು ಕೂಡ ಕಾಂಗ್ರೆಸ್ ಪರ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
    ಬಿಜೆಪಿಯವರು ಪ್ರಚಾರಕ್ಕೆ ಜನರು ಮತ ಹಾಕಿಲ್ಲ. ಎರಡೂ ಕ್ಷೇತ್ರದಲ್ಲೂ ಮತದಾರರಿಗೆ ಸಾಕಷ್ಟು ಹಣದ ಹೊಳೆಯೇ ಹರಿಸಲಾಗಿದೆ ಎಂದ ಅವರು, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಸೋಲು ಖಚಿತವಾಗಿದೆ. ಯುವಕರು, ಯುವತಿಯರು ಹಾಗೂ ನಿರುದ್ಯೋಗಿಗಳು ನಿತಿಶ್‌ಕುಮಾರ್ ವಿರುದ್ಧವಾಗಿದ್ದಾರೆ. ಅಲ್ಲದೆ, ವಲಸಿಗರಿಗೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂಬ ಕಾರಣವೂ ಸೋಲಿಗೆ ಕಾರಣವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts