More

    ಅಪೌಷ್ಟಿಕತೆಯೇ ಸವಾಲಾಗಿದೆ: ಡಿಸಿ ಆತಂಕ

    ಶಿವಮೊಗ್ಗ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆ ಪರಿಹರಿಸುವುದು ಸವಾಲಿನ ಕೆಲಸವಾಗಿದೆ. ಮೂರು ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಳವಳ ವ್ಯಕ್ತಪಡಿಸಿದರು.
    ಯುನಿಸೆಫ್ ಮತ್ತು ಐಐಎಚ್‌ಎಂಆರ್ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛತೆ, ಪೌಷ್ಟಿಕತೆ ಮತ್ತು ಸುರಕ್ಷತೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಅಪೌಷ್ಟಿಕತೆಯಿಂದ ಬಳಲುತ್ತಿರುವ ಸುಮಾರು ಮೂರು ಸಾವಿರ ಮಕ್ಕಳ ಸುರಕ್ಷತೆಗಾಗಿ ಶ್ರಮ ವಹಿಸಲಾಗುತ್ತಿದೆ. ಮೊದಲು ವೈಯಕ್ತಿಕ ಶುಚಿತ್ವಕ್ಕೆ ಗಮನಹರಿಸಿದರೆ ಅಪೌಷ್ಟಿಕತೆ ಸಮಸ್ಯೆಯನ್ನು ಪರಿಹರಿಸುವುದು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಮನಹರಿಸಬೇಕು ಎಂದರು.
    ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುವ ಹಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ನಡುವೆ ಸಮನ್ವಯತೆ ಅವಶ್ಯ. ಇಲಾಖೆಗಳ ನಡುವೆ ಹೊಂದಾಣಿಕೆಯಿಲ್ಲದಿದ್ದರೆ ಫಲಾನುಭವಿಗಳನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
    ಕೆಲವು ಯೋಜನೆಗಳ ಅನುಷ್ಠಾನದಲ್ಲಿ ಹಲವು ಇಲಾಖೆಗಳ ಸಹಭಾಗಿತ್ವ ಇರುತ್ತದೆ. ಬಹುತೇಕ ಸಂದರ್ಭದಲ್ಲಿ ಯೋಜನೆಗಳ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆಯಿಂದ ವೈಫಲ್ಯ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕೆಂದರು.
    ಯುನಿಸೆಫ್ ರಾಜ್ಯ ಸಂಯೋಜಕ ಮನೋಜ್ ಸೆಬಾಸ್ಟಿಯನ್, ವಿಭಾಗೀಯ ಸಂಯೋಜಕ ಡಾ.ರವೀಶ್ ಬಿ.ಗಣಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಉಪಕಾರ್ಯದರ್ಶಿ (ಯೋಜನೆ) ಜಯಲಕ್ಷ್ಮೀ, ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್ ಮುಂತಾದವರು ಉಪಸ್ಥಿತರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts