More

    ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಕಾರ್ಯಕ್ರಮ: ಕ್ರಮಕ್ಕೆ ವಕೀಲರ ಒತ್ತಾಯ

    ಶಿವಮೊಗ್ಗ: ನಗರದ ಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ್ರಮ ಆಯೋಜಿಸಿ ತಮ್ಮ ಪಕ್ಷದ ಚಿಹ್ನೆಯಿರುವ ಬ್ಯಾಗ್‌ಗಳನ್ನು ಮಕ್ಕಳಿಗೆ ನೀಡಿದ್ದಾರೆ. ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿಇಒ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೀಪಲ್ಸ್ ಲಾಯರ್ಸ್‌ ಗಿಲ್ಡ್‌ನ ಪದಾಧಿಕಾರಿಗಳು ಶನಿವಾರ ಡಿಸಿ ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
    ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯಕರ್ತರು ಕಲ್ಲಹಳ್ಳಿ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕದಡಿ ಶಾಲಾ ಬ್ಯಾಗ್ ವಿತರಣೆ ಮಾಡಿದ್ದಾರೆ. ಅದರ ಮೇಲೆ ಪಕ್ಷದ ಹೆಸರು ಹಾಗೂ ಚಿಹ್ನೆಯಿದೆ. ಬಿಜೆಪಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆ ಪಕ್ಷದ ಬ್ಯಾನರ್‌ನೊಂದಿಗೆ ಶಿಕ್ಷಕರೂ ಇದ್ದರು. ಅಲ್ಲಿ ರಾಜಕೀಯ ಪ್ರೇರಿತ ಭಾಷಣೆ ಮಾಡಲಾಗಿದೆ ಎಂದು ದೂರಿದರು.
    ವಿಶ್ವಸಂಸ್ಥೆಯ ಮಕ್ಕಳ ಒಡಂಬಡಿಕೆ 1992 ಮತ್ತು ಮಕ್ಕಳ ಹಕ್ಕು ಕಾಯ್ದೆ 2016ರ ಅನ್ವಯ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಬೇರೆ ಕೆಲಸಗಳಿಗೆ ಬಳಕೆ ಮಾಡಬಾರದು. ಬಿಜೆಪಿಯವರು ಮಕ್ಕಳ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂಬ ನಿಯಮಾವಳಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಪ್ರಮುಖರಾದ ಕೆ.ಪಿ.ಶ್ರೀಪಾಲ್, ಚರಣ್, ನಟರಾಜ್, ವಿಜಯಕುಮಾರ್, ಆಕಾಶ್, ವಿಕಾಸ್, ಬಿ.ಎ.ಚಿರಂತ್ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts