More

    ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಶಿವಮೊಗ್ಗದಲ್ಲಿ ಸಮಾವೇಶ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಿ ಸಮಿತಿ ನೇತೃತ್ವದಲ್ಲಿ ನ.28ರಂದು ಸಂಜೆ 4ಕ್ಕೆ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
    ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಸಂತ್ರಸ್ತರನ್ನು ಬಿಜೆಪಿ ಸರ್ಕಾರ ಕತ್ತಲೆಯಲ್ಲಿಟ್ಟಿದೆ. ಸಂತ್ರಸ್ತರ ಪರವಾಗಿ ಶೀಘ್ರ ಕಾಂಗ್ರೆಸ್ ಪಕ್ಷ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅಂದು ಶಿವಮೊಗ್ಗ ತಾಲೂಕಿನ ಆಯನೂರಿನಿಂದ ಲಕ್ಷಾಂತರ ಜನರೊಂದಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪಾದಯಾತ್ರೆ ಮತ್ತು ಸಮಾವೇಶವನ್ನು ನಾವು(ಕಾಂಗ್ರೆಸ್) ಶೋಕಿಗಾಗಿ ಮಾಡುತ್ತಿಲ್ಲ. ದಶಕಗಳಿಂದಲೂ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಉದ್ದೇಶದಿಂದ ಆಂದೋಲನದ ರೂಪದಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ. ಸಮಾವೇಶದಲ್ಲಿ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜಿವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
    ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಮುಂದೊಂದು ದಿನ ಕಾಯ್ದೆ ಮಾಡುವಾಗ ವಿರೋಧ ವ್ಯಕ್ತವಾಗಬಾರದು. ಅವರನ್ನು ಈಗಲೇ ವಿಶ್ವಾಸಕ್ಕೆ ತೆಗೆದುಕೊಂಡರೆ ವಿಧಾನಸಭೆ ಅಥವಾ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಲು ಸಹಕಾರಿ ಆಗಲಿದೆ. ಆ ಹಿನ್ನಲೆಯಲ್ಲಿ ನಾಯಕರು ಸಮಾವೇಶಕ್ಕೆ ಬರುವುದಾಗಿ ಒಪ್ಪಿದ್ದಾರೆ. ಸಮಾವೇಶದ ಸ್ಥಳವನ್ನು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.
    ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. ಸಮಿತಿ ಸಂಚಾಲಕ ಬಿ.ಎ.ರಮೇಶ್ ಹೆಗ್ಡೆ, ಕಾನೂನು ಸಲಹೆಗಾರ ಧರ್ಮರಾಜ್, ಮುಖಂಡರಾದ ಎಸ್.ಪಿ.ದಿನೇಶ್, ವಿಜಯಕುಮಾರ್ ಸಂತೇಕಡೂರು, ಕಲಗೋಡು ರತ್ನಾಕರ್, ಅನಿತಾ ಕುಮಾರಿ, ರೇಖಾ ರಂಗನಾಥ, ರಮೇಶ್, ಜಿ.ಡಿ.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts