More

    ನಾಳೆಯಿಂದ ಶಿವಮೊಗ್ಗ ಮಾರಿಕಾಂಬೆ ಜಾತ್ರೋತ್ಸವ

    ಶಿವಮೊಗ್ಗ: ಎರಡು ವರ್ಷಕ್ಕೊಮ್ಮೆ ಶಿವಮೊಗ್ಗದಲ್ಲಿ ನಡೆಯುವ ಶಕ್ತಿ ದೇವತೆ ಮಾರಿಕಾಂಬೆ ಜಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಾ.12ರಿಂದ 16ರವರೆಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದೆ. ದೇವಸ್ಥಾನದ ಎದುರು ನವದುರ್ಗಿ ಅಲಂಕಾರ ಮಾಡಲಾಗಿದೆ ಎಂದು ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು.

    ದೇವಸ್ಥಾನದಿಂದ ಗಾಂಧಿ ಬಜಾರ್‌ವರೆಗೆ ನೆರಳಿಗಾಗಿ ಶಾಮಿಯಾನ ಹಾಕಲಾಗಿದೆ. ಈ ಬಾರಿ ಸರದಿಯಲ್ಲಿ ನಿಲ್ಲುವವರ ಅನುಕೂಲಕ್ಕಾಗಿ ಬಿ.ಎಚ್.ರಸ್ತೆಯಲ್ಲೂ ಶಾಮಿಯಾನ ಅಳವಡಿಸಲಾಗಿದೆ. ಎಲ್ಲ ಕಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಾ.13 ಹೊರತುಪಡಿಸಿ ಜಾತ್ರೆಯ ಅಷ್ಟೂ ದಿನ ಸಂಜೆ ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಗಾಂಧಿ ಬಜಾರ್‌ನಲ್ಲಿ ಮಾರಿಕಾಂಬೆ ದರ್ಶನ ಮಾಡಲು ಅಂಗವಿಕಲರಿಗೆ ಮತ್ತು ಗರ್ಭಿಣಿಯರಿಗೆ ಪ್ರತ್ಯೇಕವಾಗಿ ಉಚಿತ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ವಿಶೇಷ ದರ್ಶನಕ್ಕೆ 200 ರೂ. ಶುಲ್ಕದ ಪಾಸ್ ಲಭ್ಯವಿದೆ. ಉಳಿದಂತೆ ಸಾರ್ವಜನಿಕರು ಸರದಿ ಸಾಲಿನಲ್ಲಿ ತೆರಳಿ ದರ್ಶನ ಪಡೆಯಬಹುದು ಎಂದು ಹೇಳಿದರು.
    ನಾಳೆ ಗಾಂಧಿ ಬಜಾರ್‌ನಲ್ಲಿ ದರ್ಶನ: ಜಾತ್ರೆಯ ಸಿದ್ಧತೆ ಭಾಗವಾಗಿ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ಹಾಗೂ ದೇವಾಲಯದ ಬಳಿ (ಗಂಡನಮನೆ) ಆಕರ್ಷಕವಾದ ಮಂಟಪ ನಿರ್ಮಿಸಲಾಗಿದೆ. ಸುಮಾರು 14 ಅಡಿ ಎತ್ತರದ ಮಾರಿಕಾಂಬೆ ದೇವಿಗೆ ನಾಲ್ಕು ರೇಷ್ಮೆ ಸೀರೆಗಳನ್ನು ಬಳಸಿ ಶೃಂಗಾರಮಾಡಿ, ಪೂಜೆಗೆ ಅಣಿಗೊಳಿಸಲಾಗಿದೆ. ಈ ಜಾತ್ರೆಯನ್ನು 8 ಜಾತಿಯ ಬಾಬುದಾರರು ಒಳಗೊಂಡಂತೆ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಜಾತ್ರೆಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸುವುದು ವಿಶೇಷ.
    ನಾಳೆ ಕಾರ್ಯಕ್ರಮ: ಮಾ.12ರ ಬೆಳಗ್ಗೆ 5ಕ್ಕೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿ ಬಜಾರ್‌ನ ತವರು ಮನೆಯಲ್ಲಿರುವ ಮಾರಿಕಾಂಬೆಗೆ ಉಡಿತುಂಬಿ, ಪೂಜೆ ಸಲ್ಲಿಸುವರು. ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆ ಆರಂಭಿಸುತ್ತಾರೆ. ರಾತ್ರಿ 10ರ ನಂತರ ಮಾರಿಕಾಂಬೆಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಮೆರವಣಿಗೆಯನ್ನು ಉಪ್ಪಾರ ಸಮಾಜದವರು ಗದ್ದುಗೆವರೆಗೂ ತರುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸಿ, ಅಮ್ಮನವರ ಉತ್ಸವ ಮುಂದುವರಿಯಲು ಅವಕಾಶ ಕಲ್ಪಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts