More

    ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಇನ್ನೆರಡು ದಿನ ಗಡುವು

    ಶಿವಮೊಗ್ಗ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಡಿ ಫಲಾನುಭವಿಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು. ಇಲ್ಲವಾದಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡಿಸಿ ಡಾ. ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.
    ಡಿಸಿ ಕಚೇರಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗಿರುವ ಧನಶ್ರೀ ಯೋಜನೆ(ಎಚ್‌ಐವಿ ಸೋಂಕಿತ ಮಹಿಳೆಯರಿಗೆ), ದಮನಿತ ಮಹಿಳೆಯರಿಗೆ ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಮತ್ತು ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಈಗಾಗಲೇ ತಡವಾಗಿದೆ. ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಸಮರ್ಪಕ ಪಟ್ಟಿ ತಯಾರಿಸಿಲ್ಲ. ಹಾಗಾಗಿ ಸಂಬಂಧಿಸಿದವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
    ಇನ್ನೆರಡು ದಿನದೊಳಗೆ ಸಮರ್ಪಕ ಪಟ್ಟಿ ತಯಾರಿಸಿ ಅನುಮೋದನೆ ಪಡೆಯಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ನಿಗಮದ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ತಯಾರಿ ಸಂಬಂಧ ಪರಿಶೀಲನೆ ನಡೆಸಿ ನಿರ್ದೇಶನ ನೀಡಬೇಕು ಎಂದರು.
    ಸ್ವಾಧಾರ ಗೃಹಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಮರ್ಪಕವಾಗಿ ಆಪ್ತಸಮಾಲೋಚನೆ ನಡೆಸಿ ಅವರವರ ಕುಟುಂಬಗಳಿಗೆ ಸೇರ್ಪಡೆಗೊಳಿಸಬೇಕು. ಕಾಣೆಯಾದ ಪ್ರಕರಣಗಳಲ್ಲಿನ ಮಹಿಳೆಯರು ಮತ್ತು ಮಕ್ಕಳ ಆಧಾರ್‌ಕಾರ್ಡ್ ಮೂಲಕ ಅವರ ವಿಳಾಸ ಪತ್ತೆ ಮಾಡಿ ಅವರ ಸ್ಥಳ, ಕುಟುಂಬಕ್ಕೆ ಸೇರಿಸುವ ಪ್ರಯತ್ನ ಮಾಡಬೇಕು. ಜಿಪಂ ಉಪ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸ್ವಾಧಾರ ಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
    ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್, ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ, ಚಂದ್ರಪ್ಪ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts