More

    ಉದ್ದೇಶಪೂರ್ವಕವಾಗಿ ರೈತರ ಹತ್ಯೆ: ಸಂಘಟನೆಗಳ ಆಕ್ರೋಶ

    ಶಿವಮೊಗ್ಗ: ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಕೇಂದ್ರ ಸಚಿವರ ಬೆಂಗವಾಲು ವಾಹನ ರೈತರ ಮೇಲೆ ಹರಿದ ಪರಿಣಾಮ ಮಾರಣಹೋಮ ಸಂಭವಿಸಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
    ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಿಸಾನ್ ಸಂಯುಕ್ತ ಮೋರ್ಚಾದ ಪ್ರಮುಖರು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನ ರೈತರ ಮೇಲೆ ಹರಿದಿದ್ದರಿಂದ ಕ್ರೂರ ಹತ್ಯೆ ಜರುಗಿದೆ. ಹಿಂದೆಂದೂ ಪ್ರತಿಭಟನಾನಿರತ ರೈತರ ಮೇಲೆ ಈ ರೀತಿಯ ಘೋರ ಕೃತ್ಯ ನಡೆದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಕೃತ್ಯಕ್ಕೆ ಕಾರಣರಾದ ಸಚಿವರು ಮತ್ತು ಅವರ ಬೆಂಗಾವಲು ಪಡೆಯ ಸಿಬ್ಬಂದಿ ವಿರುದ್ಧ ಉತ್ತರಪ್ರದೇಶ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಚಿವ ಅಜಯ್ ಮಿಶ್ರಾ ಇತ್ತೀಚೆಗೆ ರೈತರ ಪ್ರತಿಭಟನೆ ಕುರಿತು ಕಟುವಾಗಿ ಹೇಳಿಕೆ ನೀಡಿದ್ದರು. ಪ್ರತಿಭಟಿಸುವವರ ಮೇಲೆ ಉಗ್ರ ಕ್ರಮಕೈಗೊಳ್ಳುವ ಬಗ್ಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಇದು ಉದ್ದೇಶಪೂರ್ವಕವಾಗಿ ನಡೆದಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
    ಈ ಘಟನೆ ನಂತರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಥವಾ ಯಾವುದೇ ಉನ್ನತಾಧಿಕಾರಿಗಳು ಜವಾಬ್ದಾರಿ ವರ್ತನೆ ತೋರಿಲ್ಲ. ಗಾಯಗೊಂಡ ರೈತರನ್ನು ಅಥವಾ ಅವರ ಕುಟುಂಬದವರನ್ನು ಸಂಪರ್ಕಿಸಲಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವ ಕನಿಷ್ಠ ಭರವಸೆ ನೀಡಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿದರು.
    ಯುವ ಕಾಂಗ್ರೆಸ್: ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಹತ್ಯೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹತ್ಯೆಗೊಳಗಾದ ರೈತ ಕುಟುಂಬವನ್ನು ಭೇಟಿಯಾಗಲು ತೆರಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯಿತು. ಕಾಂಗ್ರೆಸ್‌ನ ಯಾವ ನಾಯಕರಿಗೂ ಪ್ರವೇಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.10 ತಿಂಗಳಿಂದ ರೈತರು ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕುರುಡುತನ ಪ್ರದರ್ಶಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts