More

    ಗಾಂಧಿ ಬಸಪ್ಪ ಹೆಸರು ಚಿರಸ್ಥಾಯಿ: ಶಾಸಕ ಈಶ್ವರಪ್ಪ ಬಣ್ಣನೆ

    ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಂತೆ ಗಾಂಧಿ ಬಸಪ್ಪ ಅವರು ಕೂಡ ಜೀವನದಲ್ಲಿ ಸುಖವನ್ನು ಭೋಗದಿಂದ ಕಾಣಲಿಲ್ಲ. ಬದಲಾಗಿ ಭಾರತೀಯತೆಯಲ್ಲಿ ಸುಖವನ್ನು ಕಂಡರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
    ಕುವೆಂಪು ರಂಗಮಂದಿರದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ಮಹಾತ್ಮ ಗಾಂಧೀಜಿ ಅವರ 154ನೇ ಜನ್ಮದಿನೋತ್ಸವ ಮತ್ತು ಗಾಂಧಿಬಸಪ್ಪ ಕುಟುಂಬದವರು ಆಚರಿಸುತ್ತಿರುವ ಗಾಂಧಿ ಜಯಂತಿಯ 75ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಹೆಸರು ಎಲ್ಲಿವರೆಗೂ ಇರುತ್ತದೋ ಅಲ್ಲಿವರ‌್ಗೆ ಗಾಂಧಿ ಬಸಪ್ಪ ಅವರ ಹೆಸರು ಕೂಡ ಚಿರಸ್ಥಾಯಿ ಆಗಿ ಇರಲಿದೆ ಎಂದರು.
    ಗಾಂಧೀಜಿ ಒಬ್ಬ ಶಾಂತಿಧೂತರಾಗಿದ್ದರು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅವರ ಅಪೇಕ್ಷೆಯಂತೆಯೇ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿಲ್ಲ. ದೇಶ ಇಬ್ಭಾಗ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಅಖಂಡ ಭಾರತದ ಕಲ್ಪನೆಯೊಂದಿಗೆ ಗಾಂಧೀಜಿ ಅಹಿಂಸಾತ್ಮಕವಾಗಿ ಹೋರಾಟ ಮಾಡಿದ್ದರು. ಆದರೆ ಕೆಲವೇ ಕೆಲವರ ಹಿತಾಸಕ್ತಿಗಾಗಿ ದೇಶವನ್ನು ಇಬ್ಭಾಗ ಮಾಡಲಾಗಿದೆ ಎಂದು ಹೇಳಿದರು.
    ಇಂದಲ್ಲ, ನಾಳೆ ಗಾಂಧಿ ಕನಸು ನನಸು ಆಗಲಿದ್ದು ಅಖಂಡ ಭಾರತ ನಿರ್ಮಾಣ ಆಗಲಿದೆ ಎಂಬ ವಿಶ್ವಾಸವಿದೆ. ಕೆಲವರು ನಗುನಗುತ್ತಾ ಪಾಕಿಸ್ತಾನ ಪಡೆದಿದ್ದೇವೆ. ಹೋರಾಟದ ಮೂಲಕ ಭಾರತವನ್ನೂ ಪಡೆಯುತ್ತೇವೆಂಬ ಕಲ್ಪನೆಯಲ್ಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನವಾಗಲು ಸಾಧ್ಯವಿಲ್ಲ. ಪಾಕಿಸ್ತಾನವೇ ಭಾರತಕ್ಕೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಸಾಹಿತಿ ಡಾ. ತಾರಿಣಿ ಶುಭದಾಯಿನಿ ಅವರು ಮಹಿಳೆ ಮತ್ತು ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಅದಕ್ಕೂ ಮೊದಲ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕಾರ್ಯಕಮಕ್ಕೆ ಆಗಮಿಸಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ದಂಪತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ತೆರಳಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಅಶೋಕ್‌ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts