More

    ಶಿಗ್ಗಾಂವಿ- ಸವಣೂರ ಸಮಗ್ರ ಅಭಿವೃದ್ಧಿ

    ಶಿಗ್ಗಾಂವಿ: ಶಿಗ್ಗಾಂವಿ ಮತ್ತು ಸವಣೂರ ಪಟ್ಟಣಗಳು ಮುಂದಿನ ದಿನಗಳಲ್ಲಿ ಅವಳಿ ನಗರಗಳಾಗಿ ಸಮಗ್ರ ಅಭಿವೃದ್ಧಿ ಹೊಂದಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ಸವಣೂರ ರಸ್ತೆಯಲ್ಲಿ ಶಿಗ್ಗಾಂವಿ ಉಪ-ವಿಭಾಗದ ಲೋಕೋಪಯೋಗಿ ಇಲಾಖೆ ವತಿಯಿಂದ ಶಿಗ್ಗಾಂವಿ- ಸವಣೂರ ರೈಲ್ವೆ ಸ್ಟೇಷನ್ ರಸ್ತೆ ಸುಧಾರಣೆ ಹಾಗೂ ವಿಸ್ತರಣೆ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

    ಹುಬ್ಬಳ್ಳಿ- ಧಾರವಾಡದಂತೆ ಶಿಗ್ಗಾಂವಿ- ಸವಣೂರ ಅವಳಿನಗರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಅದಕ್ಕೆ ತಕ್ಕಂತೆ ಎರಡು ನಗರಗಳು ಬೆಳವಣಿಗೆಯಾಗುತ್ತಿವೆ. ಅವಳಿ ನಗರವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಿಗ್ಗಾಂವಿ ಪಟ್ಟಣದ ಪುರಸಭೆ ವ್ಯಾಪ್ತಿಯನ್ನು 5 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಸವಣೂರ ಪಟ್ಟಣವೂ ವಿಸ್ತರಣೆಯಾಗುತ್ತದೆ. ಎರಡು ಪಟ್ಟಣಗಳು ವಿಸ್ತರಣೆಯಾದರೆ ಅವುಗಳ ಮಧ್ಯೆ ಕೇವಲ ಐದು ಕಿ.ಮೀ. ಅಂತರ ಉಳಿಯುತ್ತದೆ. ಮುಂಬರುವ ದಿನಗಳಲ್ಲಿ ಅದನ್ನು ನಗರ ಪ್ರದೇಶಕ್ಕಾಗಿ ಪರಿವರ್ತನೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಅಲ್ಲಿನ ರೈತರ ಜಮೀನುಗಳಿಗೆ ಉತ್ತಮ ಬೇಡಿಕೆ ಬಂದು ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ಎರಡು ಪಟ್ಟಣಗಳ ಮಧ್ಯೆ ಬಸ್ ಸಂಚಾರ ಹೆಚ್ಚಿಸಲು ತೀರ್ವನಿಸಲಾಗಿದೆ ಎಂದರು.

    ಶಿಗ್ಗಾಂವಿ- ಸವಣೂರ ಮಧ್ಯೆಯ ರಸ್ತೆ (ಅಗಲ) ವಿಸ್ತರಣೆ ಕೈಗೆತ್ತಿಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ ಅಂದಾಜು 11 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಿರುವ 5.5 ಮೀ. ರಸ್ತೆಯನ್ನು 7 ಮೀ.ಗೆ ವಿಸ್ತರಣೆ ಮಾಡಲಾಗುತ್ತಿದೆ. ರಸ್ತೆಗಳು ಉತ್ತಮವಾದರೆ ಎರಡು ನಗರಗಳು ಹತ್ತಿರವಾಗಲಿವೆ. ಅಲ್ಲದೆ, ಬಂಕಾಪುರದಿಂದ ಸವಣೂರವರೆಗಿ ರಾಜ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದ್ದು, ಅದು 7 ಮೀಟರ್​ಗೆ ವಿಸ್ತರಣೆಯಾಗಲಿದೆ. 9.5 ಕೋಟಿ ರೂಪಾಯಿ ಟೆಂಡರ್ ಆಗಿದ್ದು, ಮುಂದಿನ ವಾರ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ, ಈ ಭಾಗದ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಅಭಿವೃದ್ಧಿಗೆ ಎಲ್ಲ ರೀತಿಯ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

    ಶಿಗ್ಗಾಂವಿ ಹಳೇ ಬಸ್ ನಿಲ್ದಾಣದ ಹೊಸ ಕಟ್ಟಡಕ್ಕಾಗಿ 2.5 ಕೋಟಿ ರೂಪಾಯಿ ಮಂಜೂರಾಗಿದ್ದು, ಮುಂದಿನ ವಾರ ಸಾರಿಗೆ ಸಚಿವರಿಂದ ಶಂಕುಸ್ಥಾಪನೆ ನೆರವೇರಲಿದೆ. ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿರ್ವಣಗೊಳ್ಳುತ್ತಿರುವ ಕಚೇರಿಗಳ ಸಂಕೀರ್ಣ ಆರು ತಿಂಗಳೊಳಗೆ ಲೋಕಾರ್ಪಣೆಗೊಳ್ಳಲಿದೆ. 4.5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಿರೀಕ್ಷಣಾ ಮಂದಿರ (ಐಬಿ) ನಿರ್ಮಾಣ ಹಾಗೂ ವಕೀಲರ ಸಂಘದ ಕಟ್ಟಡಕ್ಕೆ 1.5 ಕೋಟಿ ರೂಪಾಯಿ ಮಂಜೂರಾಗಿದೆ. ಸವಣೂರ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡಕ್ಕೆ ಹೆಚ್ಚುವರಿಯಾಗಿ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗುವುದು ಎಂದರು.

    ಸವಣೂರ ಆಸ್ಪತ್ರೆಗೆ ಆಕ್ಸಿಜನ್ ಜನರೇಟರ್ ಬಂದಿದ್ದು, ಶಿಗ್ಗಾಂವಿ ಆಸ್ಪತ್ರೆಗೆ ಒಂದು ವಾರದಲ್ಲಿ ಎರಡು ಜನರೇಟರ್ ಬರಲಿವೆ. 15 ದಿನಗಳೊಳಗೆ ಶಿಗ್ಗಾಂವಿ, ಸವಣೂರಲ್ಲಿ ಆಕ್ಸಿಜನ್ ತಯಾರಿಕೆ ಘಟಕ ಕಾರ್ಯಾರಂಭವಾಗಲಿದೆ ಎಂದರು.

    ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜು ಬ್ಯಾಹಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಪಿಡಬ್ಲ್ಯುಡಿ ಇಂಜಿನಿಯರ್ ವಿವೇಕಾನಂದ ಚಿಕ್ಕಮಠ, ಎಒ ಪ್ರಶಾಂತ ತುರಕಾಣಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts