More

    ಬಹುಗ್ರಾಮ ಯೋಜನೆಯಡಿ ಸೊರಬ, ಶಿರಾಳಕೊಪ್ಪ ಆನವಟ್ಟಿಗೆ ಶರಾವತಿ ನೀರು

    ಶಿವಮೊಗ್ಗ: ಬಹುಗ್ರಾಮ ಯೋಜನೆಯಡಿ ಶರಾವತಿ ಹಿನ್ನೀರಿನಿಂದ ಸೊರಬ, ಆನವಟ್ಟಿ, ಶಿರಾಳಕೊಪ್ಪ, ಕುಂಸಿ ಮತ್ತಿತರ ಭಾಗಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಕಾಮಗಾರಿಗಳನ್ನು ಆರಂಭಿಸಿದ್ದು, ಮುಂದಿನ ಎರಡು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಶರಾವತಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವುದು ಮೊದಲ ಆದ್ಯತೆ ಆಗಿದೆ. ಬಳಿಕ ಜಿಲ್ಲೆಯ ಸುತ್ತಮುತ್ತ ಭಾಗಗಳಿಗೆ ಕುಡಿಯಲು ನೀರು ಕೊಡುವುದು ಎರಡನೇ ಆದ್ಯತೆ ಆಗಿದೆ. ಆ ಬಳಿಕವಷ್ಟೇ ಬೆಂಗಳೂರಿಗೆ ನೀರು ಕೊಂಡೊಯ್ಯುವ ಕುರಿತು ಸ್ಥಳೀಯರು ಹಾಗೂ ಪರಿಸರವಾದಿಗಳೊಂದಿಗೆ ಚರ್ಚಿಸಿ ಮುಂದೆ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
    ಬರಗಾಲ ಇರುವ ಕಾರಣ ಕುಡಿಯುವ ನೀರಿನ ಸಮಸ್ಯೆ ತಲೆದೂರುವ ಸಾಧ್ಯತೆ ಇದೆ. ಆದರೂ ನೀರಿನ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 12 ಕೋಟಿ ರೂ. ಮೀಸಲಿದ್ದು ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ. ಉಳಿದಂತೆ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಶರಾವತಿ ಸಂತ್ರಸ್ತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಡ್ವೋಕೇಟ್ ಜನರಲ್ ಅವರ ಸಲಹೆಯಂತೆ ಮುಂದುವರಿಯಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.

    ಹಿಂದಿನ ಸರ್ಕಾರದಿಂದ ಸಾಕಷ್ಟು ಹೊಲಸು
    ಹಿಂದಿನ ಬಿಜೆಪಿ ಸರ್ಕಾರ ಸಾಕಷ್ಟು ಹೊಲಸು ಮಾಡಿದೆ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತ್ರಿಯಿಂದಲೇ ಅನುದಾನ ಮೀಸಲಿಡದೆ ಘೋಷಣೆ ಮಾಡಿದ್ದಾರೆ. ಇದೀಗ ನಮ್ಮ ಸರ್ಕಾರ ಹಂತ ಹಂತವಾಗಿ ಅನುದಾನವಿಟ್ಟು ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಅಲ್ಲಮಪ್ರಭು ಜನ್ಮಸ್ಥಾನಕ್ಕೆ ಬಿಜೆಪಿ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ. 3 ಕೋಟಿ ರೂ. ಘೋಷಣೆ ಆಗಿದ್ದು ಅದರಲ್ಲಿ 50 ಲಕ್ಷ ರೂ. ಮಠದ ಅಭಿವೃದ್ಧಿಗೆ ಬಿಡುಗಡೆ ಆಗಿದೆಯೇ ವಿನಾ ಅಲ್ಲಮನ ಜನ್ಮಸ್ಥಳದ ಅಭಿವೃದ್ಧಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts